ರಾಣೇಬೆನ್ನೂರು, ಆ.8- ಕೊರೊನಾ ಸೋಂಕಿತರ ಹೊರತು ಪಡಿಸಿ, ಇತರ ಕಾಯಿಲೆಯುಳ್ಳವರು ಸೂಕ್ತ ಚಿಕಿತ್ಸೆ ಸಿಗದೇ ರಾಣೇಬೆನ್ನೂರು ತಾಲ್ಲೂಕಿನಲ್ಲಿ ಪ್ರತಿದಿನ ಅನೇಕರು ಸಾವನ್ನಪ್ಪುತ್ತಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಜರುಗಿಸಿ, ಜನರ ಪ್ರಾಣ ರಕ್ಷಿಸಬೇಕೆಂದು ಒತ್ತಾಯಿಸಿ, ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿರುವ 750 ಖಾಸಗಿ ಆಸ್ಪತ್ರೆಯವರು ಕೊರೊನಾ ಸೋಂಕಿತರಿಗೆ ಬೆಡ್ ಹಾಗೂ ಚಿಕಿತ್ಸೆ ನೀಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ತಿಳಿಸಿದ್ದು, ಸ್ವಾಗತಾರ್ಹವಾದುದು. ರಾಣೇಬೆನ್ನೂರು ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಕೋವಿಡ್ ಹೊರತು ಪಡಿಸಿ, ಇತರ ಕಾಯಿಲೆಯವರಿಗೆ ಕೊರೊನಾ ಸೋಂಕಿತರಲ್ಲ ಎನ್ನುವ ದಾಖಲೆ ತರುವಂತೆ ಹೇಳುತ್ತಿರುವದು ಜನರು ಹಿಂಸೆ ಅನುಭವಿಸಿ, ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ರವಿ ಪಾಟೀಲ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ರಾಣೇಬೆನ್ನೂರಿನಲ್ಲಿ ಕೋವಿಡ್ ಪರೀಕ್ಷೆ ಹಾಗೂ ಶವಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದು, ಒಂದು ವಾರದೊಳಗೆ ಕ್ರಮ ಜರುಗಿಸ ದಿದ್ದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.
ಚಂದ್ರಪ್ಪ ಬೇಡರ, ಜಯಣ್ಣ ಮಾಗನೂರ, ಬಿ.ಕೆ.ರಾಜನಹಳ್ಳಿ, ಕೃಷ್ಣಮೂರ್ತಿ ಲಮಾಣಿ, ಹನುಮಂತಪ್ಪ ಕಬ್ಬಾರ, ವಿ.ಕೆ.ಅಜರಡ್ಡಿ, ಹರಿಹರಗೌಡ ಪಾಟೀಲ, ಮಾರುತಿ ತಳವಾರ್, ಜಮಾಲಸಾಬ ಶೇತಸನದಿ, ಸಂಜಯ ಲಮಾಣಿ ಮುಂತಾದವರು ಪಾಟೀಲ ಜೊತೆಗಿದ್ದರು.