ರಾಣೇಬೆನ್ನೂರು : ರೈತ ದಿನಾಚರಣೆಯಲ್ಲಿ ರೈತರಿಗೆ ಗೌಡಪ್ಪಳವರ ಕಿವಿಮಾತು
ರಾಣೇಬೆನ್ನೂರು, ಡಿ.23- ಅವಶ್ಯಕತೆಗಿಂತ ಹೆಚ್ಚು ಯೂರಿಯಾ ಗೊಬ್ಬರ ಬಳಸಿದರೆ ನಳನಳಿಸುವ ಪೈರು ಕ್ರಿಮಿಕೀಟಗಳನ್ನು ಆಕರ್ಷಿಸುತ್ತದೆ. ಜೊತೆಗೆ ಮಾರುಕಟ್ಟೆಯಲ್ಲಿ ಗೊಬ್ಬರದ ಅಭಾವ ಉಂಟಾಗುತ್ತದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಬಿ.ಎಚ್. ಗೌಡಪ್ಪಳವರ ಹೇಳಿದರು.
ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಆರು ತಿಂಗಳು ಪ್ರಧಾನಿಯಾಗಿದ್ದ ಚೌಧರಿ ಚರಣಸಿಂಗ್ ರೈತಪರವಾಗಿ ಅನೇಕ ಮಸೂದೆಗಳನ್ನು ತಂದರು. ಅವರಲ್ಲಿದ್ದಂತಹ ರೈತ ಪರ ಚಿಂತನೆಗಳಿಂದಾಗಿ ಅವರ ಜಯಂತಿಯು ರೈತ ದಿನಾಚರಣೆಯಾಗಿದೆ ಎಂದರು.
ಸಗಣಿ ಗೊಬ್ಬರ ಬಳಸದೆ ಅತಿಯಾಗಿ ರಾಸಾಯನಿಕ ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಮಣ್ಣು ಪರೀಕ್ಷೆ ಮಾಡಿಸಿ, ಅದರಲ್ಲಿಲ್ಲದ ಶಕ್ತಿವರ್ಧಕಗಳನ್ನು ಕೊಟ್ಟು ಫಲವತ್ತತೆ ಹೆಚ್ಚಿಸಬೇಕು. ಇಳಿಜಾರಿಗೆ ಅಡ್ಡಲಾಗಿ ಬಿತ್ತುವ, ಬದು ನಿರ್ಮಿಸುವ ಮೂಲಕ ಮಣ್ಣು ನೀರಿನ ಜೊತೆ ಹರಿದು ಹೋಗದಂತೆ ತಡೆಯಬೇಕು. ಈ ಎಲ್ಲ ಕಾರ್ಯಗಳಿಗೂ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಗೌಡಪ್ಪಳವರ ಹೇಳಿದರು.
ನಿವೃತ್ತ ಕೃಷಿ ಅಧಿಕಾರಿ ಶಾಮನೂರು ಮಾತನಾಡಿ, ಅತಿಯಾದ ತಂತ್ರಜ್ಞಾನದ ಬಳಕೆ ರೈತರನ್ನು ತೊಂದರೆಗೀಡು ಮಾಡುತ್ತದೆ. ರಾಸಾಯನಿಕ ಹಾಗೂ ಕ್ರಿಮಿನಾಶಕಗಳ ಬಳಕೆ, ಇಲ್ಲದ ಬೆಳೆಗಳ ಬದಲಾವಣೆ, ಅತಿಯಾದ ನೀರಾವರಿ ಹೀಗೆ ಎಲ್ಲವನ್ನು ಅತಿಯಾಗಿ ಬಳಕೆ ಮಾಡಿ ಭೂಮಿ ಬರಡಾಗುತ್ತಿದೆ. ತನ್ನ ಮನೆ ಬಳಕೆಗೆ ಬೇಕಾಗುವ ದವಸ ಧಾನ್ಯಗಳನ್ನು ಬೆಳೆದುಕೊಳ್ಳದೇ ಕೇವಲ ವಾಣಿಜ್ಯ ಬೆಳೆಗಳ ಬೆನ್ನು ಹತ್ತಿರುವುದು ಎಷ್ಟು ಸರಿ? ಈ ಎಲ್ಲವುಗಳಿಂದ ಹೊರಬಂದು ರೈತ ಗಟ್ಟಿ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎಂ.ಎಸ್. ಪಾಟೀಲ, ನಿರ್ದೇಶಕರಾದ ಮಂಜುಳಾ ಬಣಕಾರ, ವಿಷ್ಣು ಜಿಂಗಾಡೆ, ಶಿವಪ್ಪ ಆನ್ವೇರಿ ಇನ್ನಿತರರಿದ್ದರು.