ರಾಣೇಬೆನ್ನೂರು, ಡಿ.17- ಇಲ್ಲಿನ ಕುರುಬಗೇರಿ ರಸ್ತೆಯಲ್ಲಿನ ಹಳೇ ಬನಶಂಕರಿ ದೇವಸ್ಥಾನವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಒಂದೆರಡು ತಿಂಗಳೊಳಗೆ ಉದ್ಘಾಟನೆಗೊಳ್ಳಲಿದೆ.
ಶಿಗ್ಗಾವಿಯ ವಾಸ್ತು ತಜ್ಞ ಕಮ್ಮಾರ ಅವರ ಆಣತಿಯಂತೆ, ಪೂರ್ವಾಭಿಮುಖದ ನಿವೇಶನದ 180 ಅಡಿ ಸುತ್ತಳತೆಯಲ್ಲಿ ಉತ್ತರ-ದಕ್ಷಿಣ 31 ಅಡಿ, ಪೂರ್ವ-ಪಶ್ಚಿಮ 39 ಅಡಿ, ಮುಖ ಮಂಟಪ 14×14 ಅಡಿ ಹಾಗೂ ಗರ್ಭಗುಡಿ ಸೇರಿದಂತೆ, ಎರಡನ್ನೂ ಧ್ವಜಾಯದಲ್ಲಿ ಕಟ್ಟಲಾಗುತ್ತಿದೆ.
ನೆಲದಿಂದ 40 ಅಡಿ ಎತ್ತರದ ಮೂರು ಹಂತದ ಕರ್ಣಗೂಡು ಗೋಪುರವನ್ನು ನಿರ್ಮಿಸಲಾಗುತ್ತಿದೆ. ದೇವಿಗೆ ಶಂಖವಾದ್ಯ ಅವಶ್ಯವಿದ್ದು, ಗೋಪುರದ ಪೂರ್ವ ಈಶಾನ್ಯ ಹಾಗೂ ಉತ್ತರ ಈಶಾನ್ಯ ದಿಕ್ಕುಗಳಲ್ಲಿ ಶಂಖುಗಳನ್ನು ಅಳವಡಿಸಲು ಸ್ಥಳಾವಕಾಶ ಮಾಡಲಾಗುತ್ತಿದೆ.
8 ಸಾವಿರ ಅಡಿ ಕಲ್ಲಿನ ಈ ಕಟ್ಟಡಕ್ಕೆ, ಸುಮಾರು 50 ಲಕ್ಷ ವೆಚ್ಚದ 20 ಲಾರಿ ಲೋಡ್‌ನಷ್ಟು ದೊಡ್ಡಬಳ್ಳಾಪುರದ ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ದೊರಕುವ ಗಟ್ಟಿಕಲ್ಲುಗಳನ್ನು ತರಿಸಲಾಗಿದೆ. ಮುರುಡೇಶ್ವರದ ದೇವಸ್ಥಾನ ನಿರ್ಮಾಣದಲ್ಲಿ ಭಾಗಿಗಳಾಗಿದ್ದ ಶಿಲ್ಪಿ ಗೋವಿಂದ ನಾಗಪ್ಪನಾಯ್ಕ ಅವರು ತಮ್ಮ ಸಹಚರರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರದ ನಿರ್ಲಕ್ಷ
ಬನಶಂಕರಿ ದೇವಿ ಗುಡಿ ನಿರ್ಮಾಣಕ್ಕಾಗಿ ಸರ್ಕಾರದ ಸಹಾಯಧನ ಪಡೆಯಲು ಕಮಿಟಿಯವರು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದು ಎಷ್ಟೇ ಪ್ರಯತ್ನ ನಡೆಸಿದರೂ ಸಚಿವರಿಂದಾಗಲೀ, ಸರ್ಕಾರದಿಂದಾಗಲೀ ಯಾವುದೇ ಸ್ಪಂದನೆ ಸಿಗದಿರುವುದಕ್ಕೆ ಸಮಿತಿಯ ಅಧ್ಯಕ್ಷ ಮಂಜುನಾಥ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಮೂರ್ತಿಗೆ ಚೀಟಿ….
ದೇವಿ ಮೂರ್ತಿ ಮಾಡಿಸಿಕೊಡಲು 5 ಜನ ದೇವಿ ಭಕ್ತರು ತಮ್ಮ ಒತ್ತಡದ ಅಪೇಕ್ಷೆಯನ್ನು ವ್ಯಕ್ತ ಪಡಿಸಿದ್ದರು. ಯಾರೊಬ್ಬರಿಗೂ ನೋವುಂಟು ಮಾಡಬಾರದು ಎಂದು ದೇವಿ ಹಾಗೂ ಭಕ್ತರ ಸಮಕ್ಷಮದಲ್ಲಿ ಅಪೇಕ್ಷಿತರ ಹೆಸರುಗಳನ್ನು ಚೀಟಿಯಲ್ಲಿ ಬರೆದು ಹಾಕಿ, ಅದರಲ್ಲಿ ಒಂದನ್ನ ತೆಗೆದು ಅವರಿಗೆ ಒಪ್ಪಿಗೆ ಕೊಡಲಾಯಿತು. ಬೆಳ್ಳಿಯ ಉತ್ಸವ ಮೂರ್ತಿ ತಯಾರಿಸಲು ಸಹ ಇದೆ ಮಾರ್ಗವನ್ನು ಅನುಸರಿಸಲಾಗಿದೆ.
ತಾಲ್ಲೂಕಿನ ಚಿಕ್ಕಕುರುವತ್ತಿಯ ಭಕ್ತರು 2 ಲಕ್ಷ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಹಾಯ ಧನ 2 ಲಕ್ಷ 50 ಸಾವಿರ ಸೇರಿದಂತೆ, ದೇವಸ್ಥಾನದ ನಿರ್ಮಾಣಕ್ಕೆ ಬೇಕಾಗಬಹುದಾದ ಒಟ್ಟು ಎರಡು ಕೋಟಿಯಷ್ಟು ಹಣವನ್ನು ನಗರದ ಭಕ್ತರೇ ಸ್ವಯಂಪ್ರೇರಿತರಾಗಿ ತಂದುಕೊಟ್ಟಿ ದ್ದಾರೆ. ಬಾದಾಮಿಯ ದೇವಸ್ಥಾನದಲ್ಲಿರುವಂತೆಯೇ ಸಿಂಹಾರೂಢಳಾದ ದೇವಿ ಮೂರ್ತಿಯನ್ನು ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿ ತಯಾರಿಸಲಾಗುತ್ತಿದೆ. 4 ಅಡಿ 11 ಇಂಚು ಎತ್ತರದ ಮೂರ್ತಿಗೆ ಕೃಷ್ಣ ಶಿಲೆ ಬಳಸಲಾಗಿದೆ.
ಹೊಸಗುಡಿ ಕಟ್ಟಲು ತಯಾರಿ ನಡೆಸಿದಾಗ ಕಮಿಟಿಯವರ ಬಳಿ ಇದ್ದದ್ದು ಕೇವಲ 6 ಲಕ್ಷ ಹಣ. ಅದಕ್ಕೆ ಮತ್ತಷ್ಟು ಸೇರಿಸಿ ಪಕ್ಕದಲ್ಲಿದ್ದ ಜಾಗವನ್ನು ಖರೀದಿಸಲಾಯಿತು. ನಾವು ಯಾರ ಬಳಿಯೂ ವಂತಿಗೆ ಕೇಳಲು ಹೋಗಲಿಲ್ಲ. ಭಕ್ತರೇ ನಮ್ಮನ್ನು ಕರೆದು ಹಣ ನೀಡಿದ್ದಾರೆ. ಕೊರೊನಾ ಸೋಂಕಿನ ಭಯದಿಂದ ಮೂರು ತಿಂಗಳು ಕೆಲಸಕ್ಕೆ ತಡೆ ಉಂಟಾಯಿತು. ಆದರೆ ಹಣದ ಕೊರತೆ ಎಂದೂ ಕೆಲಸಕ್ಕೆ ಕಾಡಲಿಲ್ಲ ಎಂದು ಸಮಿತಿಯ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಅವರು ದೇವಿಯ ಮಹಿಮೆಯನ್ನು ಕೊಂಡಾಡಿದ್ದಾರೆ.