ಸಂಸ್ಕೃತಿ, ಸಂಸ್ಕಾರಗಳನ್ನು ಪಾಲಿಸಿದರೆ ಜೀವನ ಸಾರ್ಥಕ

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ರಟ್ಟಿಹಳ್ಳಿಯ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದನೆ

ರಾಣೇಬೆನ್ನೂರು, ನ.30-  ಮನುಷ್ಯನು ಈ ಪುಣ್ಯ ಭೂಮಿಯ ಮೇಲೆ ಜನ್ನ ತಾಳಿದ ನಂತರ ಬದುಕಿನುದ್ದಕ್ಕೂ ದಿನಂಪ್ರತಿ ಧರ್ಮಾಚರಣೆ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಪಾಲಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಸಂತೃಪ್ತಿ ಹಾಗೂ ಸಂತಸ, ಸಮಾಧಾನ ಸದಾ ಪ್ರಾಪ್ತಿಯಾಗುವುದರ ಮೂಲಕ ಜೀವನ ಪಾವನವಾಗುವುದು ಎಂದು  ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯರು ಹೇಳಿದರು.  

ಮಂಗಳವಾರ ನಗರದ ಹೊರವಲಯದ ಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದ ಆವರಣದಲ್ಲಿ ಲೋಕ ಕಲ್ಯಾಣಾರ್ಥ ವಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ ನಿರಂತರ 384 ದಿನಗಳ ಕಾಲ ನಡೆಯುತ್ತಿರುವ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮ ಹಾಗೂ  9ನೇ ವರ್ಷದ ಶನೈಶ್ಚರ ಮಂದಿರದ ವಾರ್ಷಿಕೋತ್ಸವದ  ಅಂಗವಾಗಿ ಗುಗ್ಗಳ ಉತ್ಸವ,  ರಾಜ್ಯಮಟ್ಟದ ಪುರವಂತರ ಮೇಳ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಯ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ಧರ್ಮ ಮತ್ತು ಸಂಸ್ಕಾರವನ್ನು ಪಸರಿಸಲು ವೀರಭದ್ರನ ಅವತಾರದಲ್ಲಿ ಪುರವಂತರನ್ನು ಆ ಭಗವಂತನು ಧರೆಗೆ ಕಳುಹಿಸಿದ್ದಾನೆ. ಪುರವಂತರು ಗುಗ್ಗಳ ಮತ್ತು ಪುರವಂತಿಕೆಯನ್ನು ಮಾಡುವಾಗ ಅವರುಗಳನ್ನು ದೈವ ಸ್ವರೂಪಿ ಯಂತೆ ಕಾಣುವುದರ ಮೂಲಕ ನಮಸ್ಕರಿಸಿ, ಗೌರವಿಸುವುದು ಧರ್ಮದ ಸಂಕೇತವಾಗಿದ್ದು, ಭಗವಂತನ ಸಾಕ್ಷಾತ್ಕಾರ ಪಡೆಯಲು ಜನರು ಮುಂದಾಗಬೇಕು ಎಂದು ಹೇಳಿದರು. 

ಸಂಗೊಳ್ಳಿಯ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮಠದ ಶಿವಯೋಗಿ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸಿದ್ದರು. ಹಾವೇರಿ ಬಣ್ಣದ ಮಠ ಅಭಿನವ ಶ್ರೀ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕೋಡಿಯಾಲದ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ, ನಿಚ್ಚವ್ವನಹಳ್ಳಿ ಬೃಹನ್ಮಠದ ಶ್ರೀ ಶಿವಯೋಗಿ ಹಾಲ ಸ್ವಾಮೀಜಿ ಆಶೀರ್ವಚನ ನೀಡಿದರು.

ಗದಗದ ವೀರೇಶ್ವರ ಪುಣ್ಯಾಶ್ರಮದ ಮರೇಶ ಕೋಮಡಗೂಳಿ ಮತ್ತು ಬಸವರಾಜ ಹೂಗಾರ ಸಂಗಡಿಗರಿಂದ ಸಂಗೀತ ಸುಧೆ ನೆರವೇರಿತು. 

ಸದಾಶಿವ ಉಪ್ಪಿನ, ಚಂದ್ರಣ್ಣ ಜಂಬಗಿ, ಮಹಾರುದ್ರಪ್ಪ ಇಟಗಿ, ಬಿದ್ದಾಡೆಪ್ಪ ಚಕ್ರಸಾಲಿ, ಚಂದ್ರಣ್ಣ ರಮಾಳದ, ಶೇಖಪ್ಪ ಜಾಡಮಾಲಿ, ಮಲ್ಲಿಕಾರ್ಜುನ ಅಂಗಡಿ, ವಿಶಾಲಾಕ್ಷಿ ಪಾಟೀಲ, ಸೋಮಣ್ಣ ಹಿರೇಬಿದರಿ, ಮಲ್ಲಿಕಾರ್ಜುನ ರಂಗನವರ, ಪುಟ್ಟಪ್ಪ ಅಂಗಡಿ, ಸಿದ್ದಪ್ಪ ಬಾಗಲವರ, ಶಕುಂತಲಾ ಅಂಗಡಿ, ಈರಣ್ಣ ಮಾಕನೂರ, ಬಸವರಾಜ ರೊಡ್ಡನವರು ಸೇರಿದಂತೆ ನೂರಕ್ಕೂ ಅಧಿಕ ಪುರವಂತರು ಇದ್ದರು. ಶರಣಯ್ಯ ಮತ್ತು ಪುನೀತ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು.

error: Content is protected !!