ರಾಣೇಬೆನ್ನೂರು ತಾಲ್ಲೂಕು ಪಂಚಾಯಿತಿ ಸಭೆ: ಸದಸ್ಯರ ನಿರಾಸಕ್ತಿ

ರಾಣೇಬೆನ್ನೂರು, ಜ.18 – ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ 844 ಹೆಕ್ಟೇರ್ ಜಮೀನಿನಲ್ಲಿ ಬೆಳೆ ನಾಶವಾಗಿದೆ. ಕಂದಾಯ ಇಲಾಖೆಯ ಜೊತೆ ಸೇರಿ ರೈತರ ಜಮೀನುಗಳಿಗೆ ತೆರಳಿ ಪರಿಶೀಲಿಸಿ ವರದಿ ತಯಾರಿಸುತ್ತಿದ್ದು, ಇನ್ನೊಂದು ವಾರದಲ್ಲಿ ಸರ್ಕಾರಕ್ಕೆ ಕಳಿಸಲಾಗುವದು ಎಂದು ಕೃಷಿ ಅಧಿಕಾರಿ ಎಸ್.ಎಂ.ಗೌಡಪ್ಪಳವರ ಸಭೆಗೆ ತಿಳಿಸಿದರು.

ಶಾಲೆಗಳಲ್ಲಿ ಶೌಚಾಲಯಗಳನ್ನು ಹೊಸದಾಗಿ ನಿರ್ಮಿಸುವುದಕ್ಕಿಂತ ಈಗಿರುವ ಶೌಚಾಲಯಗಳನ್ನು ನಿರ್ವಹಿಸಲು ಗಮನ ಕೊಡಬೇಕಿದೆ. ಸರ್ಕಾರ ಕೈಗೊಂಡಿರುವ ಯೋಜನೆಗಳಿಗೆ ರಕ್ಷಣೆ ಬೇಕಿದೆ ಎಂದು ಇಂದು ನಡೆದ ತಾಪಂ ಸಭೆಯಲ್ಲಿ ಒಂದಿಬ್ಬರು ಸದಸ್ಯರು ಮಾತನಾಡಿದರು. ಸಭೆಗೆ ಬರದ ಅಧಿಕಾರಿಗಳ ಬಗ್ಗೆ ಕ್ರಮ ಜರುಗಿಸಲು ಪ್ರಸ್ತಾಪಿಸಲಾಯಿತು.

ಪ್ರಸಕ್ತ ಜಿ.ಪಂ ಹಾಗೂ ತಾ.ಪಂಗಳ ಅವಧಿ ಮುಗಿಯುತ್ತಾ ಬಂದಿದ್ದು, ಇಲ್ಲಿನ ತಾಪಂ ಸದಸ್ಯರು  ಸಭೆಯಲ್ಲಿ ಯಾವುದೇ ಚರ್ಚೆ, ಪ್ರಶ್ನೆಗಳಿಗೆ ಆದ್ಯತೆ ಕೊಡದೇ ಕಾಟಾಚಾರದ ಸಭೆ ನಡೆಸಿದಂತೆ ಕಂಡು ಬಂದಿತು. 

ಇಂದಿನ ಹಾಗೂ  ಕಳೆದ ಸಭೆಯ ಕೋರಂ ಭರ್ತಿಗಾಗಿ ಅಧ್ಯಕ್ಷರು ಗಂಟೆಗಟ್ಟಲೇ ಕಾಯುವಂತಾಯಿತು.ಅನೇಕ ಸದಸ್ಯರಿಗೆ ತಾವು ಮತ್ತೆ ಸ್ಪರ್ಧಿಸಲು ಮೀಸಲಾತಿ ಬದಲಾಗಬಹುದು. ಅನೇಕರಿಗೆ ಇತರೆ ಆಕಾಂಕ್ಷಿಗಳಿಂದ ತಡೆ ಉಂಟಾಗಬಹುದು. ಒಬ್ಬಿಬ್ಬರಿಗೆ ಜಿಪಂ ಪ್ರವೇಶದ ಕನಸು, ಹೀಗೆ ನಿರಾಸಕ್ತಿಗೆ ಅನೇಕ ಕಾರಣಗಳು ಹರಿದಾಡಿದವು.

ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರಿ ಹೊನ್ನಾಳಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ ಗಂಜಾಮದ, ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಮಲ್ಲಾಡದ್‍ ವೇದಿಕೆಯಲ್ಲಿದ್ದರು. ಮ್ಯಾನೇಜರ್ ಬಸವರಾಜ ಶಿಡೇನೂರ  ಸ್ವಾಗತಿಸಿದರು.

error: Content is protected !!