ರೈಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಎಚ್ಚರಿಕೆ
ರಾಣೇಬೆನ್ನೂರು, ಜ.13- ವಾಣಿಜ್ಯ ನಗರಿ ರಾಣೇಬೆನ್ನೂರು ಮಧ್ಯ ಭಾಗದಲ್ಲಿ ಹಾಯ್ದು ಹೋಗಿರುವ ರೈಲ್ವೆ ಮೇಲ್ಸೇತುವೆಗೆ ಈಗಾಗಲೇ 34.86 ಕೋಟಿ ರೂ. ಮಂಜೂರಾಗಿ, ಬೆಂಗಳೂರು ಮೂಲದ ಶ್ರೀನಿವಾಸ್ ಶೆಟ್ಟಿ ಎಂಬುವರಿಗೆ ಟೆಂಡರ್ ಆಗಿದೆ.
ಮೇಲ್ಸೇತುವೆಗೆ ಅವಶ್ಯವಿರುವ 2 ಎಕರೆ 30 ಗಂಟೆ ಜಮೀನನ್ನು ಸರ್ವೇ ಮಾಡಿದ್ದರಿಂದ ರೈತರು ಕೂಡಾ ಭೂಮಿ ಕೊಡಲು ಒಪ್ಪಿ
ಎಲ್ಲ ಭೂ ಸ್ವಾಧೀನ ಪ್ರಕ್ರಿಯೆ ಅಂತ್ಯಗೊಂಡು 8 ತಿಂಗಳು ಕಳೆದರೂ ಭೂ ಪರಿಹಾರದ ಅರ್ಧ ಭಾಗದ ಹಣವನ್ನು ಇಲ್ಲಿಯ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಸರ್ಕಾರದ ಗಮನಕ್ಕೆ ತಂದು ತುರ್ತಾಗಿ ತನ್ನ ಪಾಲಿನ ಅನುದಾನವನ್ನು ಜಮಾ
ಮಾಡಿಸದೆ ಬೇಜವಾಬ್ದಾರಿಯನ್ನು ತೋರಿಸಿರುವುದರ ಪರಿಣಾಮವಾಗಿ ಮೇಲ್ಸೆ ತುವೆ ಕಾರ್ಯಾರಂಭ ವಿಳಂಬವಾಗಿ
ದಿನನಿತ್ಯ ಸಾವಿರಾರು ಜನರು ಅಂಗೈಯಲ್ಲಿ ಜೀವ ಹಿಡಿದು ಕೊಂಡು ಈ
ಭಾಗದಲ್ಲಿ ಪ್ರಯಾಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರದ ಬೇಜವಾಬ್ದಾರಿತನ, ಜಿಲ್ಲಾಧಿ ಕಾರಿಗಳ ನಿರ್ಲಕ್ಷ್ಯತನ, ಪಿಡಬ್ಲ್ಯೂಡಿ, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನ ಖಂಡಿಸಿ, ಮಂಜೂರಾಗಿರುವ ಮೇಲ್ಸೇತುವೆ ಕಾಮಗಾರಿಯನ್ನು ಪ್ರಾರಂಭಿಸ ಬೇಕೆಂದು ಒತ್ತಾಯಿಸಿ ಇದೇ 30ರ ಸೋಮ ವಾರ ರಾಣೇಬೆನ್ನೂರು ಬಂದ್’ ಮಾಡಿ ರೈಲು ರೋಖೋ ಹಾಗೂ ರಾಜ್ಯ ಹೆದ್ದಾರಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದೆಂದು ರೈಲ್ವೆ ಮೇಲ್ಸೇ ತುವೆ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.
ಇಂದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ಪಿಡ ಬ್ಲ್ಯೂಡಿ ಮತ್ತು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸುವ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತರ್ ರಾಜ್ಯ, ಅಂತರ್ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನೇ ನಿತ್ಯವೂ ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಇಲ್ಲಿ ರೈಲ್ವೆ ಮೇಲ್ಸೇ ತುವೆ ಅತ್ಯಂತ ಅವಶ್ಯವಿದೆ ಎಂದು ಹೇಳಿದರು.
ಹೋರಾಟ ಸಮಿತಿ ಪ್ರಮುಖರಾದ ಉಮೇಶ ಗುರುಲಿಂಗಪ್ಪಗೌಡ್ರ ಮಾತನಾಡಿ, 30 ನೇ ತಾರೀಖು ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆಯೊಂದಿಗೆ ಚಳುವಳಿ ನಡೆ ಯುತ್ತೆ, ಹತ್ತಾರು ಸಾವಿರ ಜನರು ಈ ಚಳುವಳಿಯಲ್ಲಿ ಭಾಗವಹಿಸುತ್ತಾರೆಂದರು.
ಶಿರಸ್ತೇದಾರ್ ಶ್ರೀಮತಿ ವೀಣಾ ಕಲ್ಲಮ್ಮ ನವರ, ಪಿಡಬ್ಲ್ಯೂಡಿ ಇಲಾಖೆಯ ಎಇಇ ಹೊನ್ನ ಪ್ಪ ಮತ್ತು ರೈಲ್ವೆ ಇಲಾಖೆಯ ಆರ್.ಹೆಚ್. ಗುಳೇದ ಇವರ ಮುಖಾಂತರ ಹಿರಿಯ ಅಧಿಕಾರಿ ಗಳಿಗೆ ಈ ಸಂಬಂಧ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟಗಾರರಾದ ತುಕ್ಕೆಪ್ಪ ಲಮಾಣಿ, ಜಗದೀಶ್ ಕೆರೂಡಿ, ಬಾಬುಗೌಡ, ನಿಂಗಪ್ಪ ಹೊನ್ನಾಳಿ, ಮಾಂತೇಶ ಆನವೇರಿ, ಹರಿಹರಗೌಡ ಪಾಟೀಲ, ಯಲ್ಲಪ್ಪ ಓಲೇಕಾರ, ರಾಜು ಓಲೇಕಾರ, ಶಿವಣ್ಣ ನಾಗೇನಹಳ್ಳಿ, ನಾಗಣ್ಣ ಗೂಳಣ್ಣನವರ, ಬಸಣ್ಣ ನೆಲೋಗಲ್. ಶಂಭು ನರಸಗೊಂಡರ, ಇಸ್ಮಾಯಿಲ್ ಸಾಬ್ ರಾಣೇಬೆನ್ನೂರು, ಬಸವರಾಜ ಬಣಕಾರ, ಕಿರಣ ಹೊನ್ನಾಳಿ, ರಾಜಪ್ಪ ಹೊಳೆಯಮ್ಮನವರ, ಸಂತೋಷ ವಡ್ಡರ ಮುಂತಾದವರು ಭಾಗವಹಿಸಿದ್ದರು.