4ನೇ ಬಾರಿ ಶಾಸಕನಾಗಲು ಆಶೀರ್ವದಿಸಿ

4ನೇ ಬಾರಿ ಶಾಸಕನಾಗಲು ಆಶೀರ್ವದಿಸಿ

ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಸ್.ವಿ.ರಾಮಚಂದ್ರ

ನನಗೆ ಆರೋಗ್ಯ ಸರಿಯಿಲ್ಲ ಎಂಬ ವಿರೋಧ ಪಕ್ಷದವರ ವದಂತಿಗಳಿಗೆ ಕಿವಿಗೊಡಬೇಡಿ.  ಇನ್ನೂ ಎರಡು  ಚುನಾವಣೆ ಎದುರಿಸುವಷ್ಟು ಸದೃಢನಾಗಿರುವೆ. ನಿಮ್ಮ ಮನೆಯ ಮಗನಾಗಿ ಸೇವೆಗೈಯ್ಯುವೆ. ತಮ್ಮ ಅಹವಾಲು ಸ್ವೀಕಾರಕ್ಕೆ ನಮ್ಮ ಮನೆ ಬಾಗಿಲು ಸದಾ ತೆರೆದಿರುತ್ತದೆ.

– ಎಸ್.ವಿ. ರಾಮಚಂದ್ರ, ಶಾಸಕ

ಜಗಳೂರು, ಮಾ.18- ಬರಪೀಡಿತ ಕ್ಷೇತ್ರಕ್ಕೆ ಮೂರು ಬೃಹತ್ ಯೋಜನೆಗಳನ್ನು ಸಾಕಾರಗೊಳಿಸಿ ಹಸಿರು ನಾಡನ್ನಾಗಿಸಲು ಶ್ರಮಿಸಿರುವ ನನಗೆ ಮುಂಬರುವ ಚುನಾವಣೆಯಲ್ಲಿ ಮತ ನೀಡಿ 4ನೇ ಬಾರಿ ಶಾಸಕನಾಗಲು ಆಶೀರ್ವದಿಸಿ ಎಂದು ಶಾಸಕ ಎಸ್.ವಿ.ರಾಮಚಂದ್ರ ಮನವಿ ಮಾಡಿದರು.

ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಕ್ಷೇತ್ರಕ್ಕೆ  3500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪರ್ವ ಸಾಗಿದೆ.  1250 ಕೋಟಿ ರೂ. ವೆಚ್ಚದಲ್ಲಿ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಚಾಲನೆ ಸಿಕ್ಕಿದೆ‌. 45 ಸಾವಿರ ಎಕರೆಗೆ ಹನಿ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 482 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲ್ಲೂಕಿನ ಸಂತೆಮುದ್ದಾಪುರ ಸೇರಿದಂತೆ 164 ಗ್ರಾಮಗಳಿಗೆ ತುಂಗಭದ್ರಾ ನೀರು ಪೂರೈಕೆ ಯೋಜನೆಗೆ  ಶಂಕುಸ್ಥಾಪನೆ ನೆರವೆರಿಸಲಾಗಿದೆ.

 350 ಕೋಟಿ ರೂ. ವೆಚ್ಚದಲ್ಲಿ ಅನೇಕ ಸಮುದಾಯ ಭವನಗಳು, ಹಳ್ಳಿಗಳ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿರುವೆ. 2 ಕೋಟಿ ರೂ. ರಾಜ್ಯ ಹೆದ್ದಾರಿ ಅಭಿವೃದ್ದಿ,  4 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ದ್ವಿಮುಖ ರಸ್ತೆ ನಿರ್ಮಾಣ ಮಾಡಲಾಗಿದೆ. ನನ್ನ ಆಡಳಿತಾವಧಿಯಲ್ಲಿ  ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಿರುವೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಸಂತೆಮುದ್ದಾಪುರ ಮತ್ತು ಇತರೆ 164 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ  ಹಳ್ಳಿಗಳ ಮನೆಬಾಗಿಲಿಗೆ ಕುಡಿಯುವ ನೀರು ಪೂರೈಕೆಯ ಬೃಹತ್ ಯೋಜನೆ ಶಿಲಾನ್ಯಾಸ ಗೊಂಡಿರುವುದು ಸಂತಸದ ಸಂಗತಿ ಎಂದರು.

ಕ್ಷೇತ್ರಕ್ಕೆ 2300 ಕೋಟಿ ರೂ. ನೀರಾವರಿ ಯೋಜನೆಗಳ ಅನುದಾನ ತಂದಿರುವ ಕೀರ್ತಿ ಬರದ ನಾಡಿನ ಭಗೀರಥ  ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಸಲ್ಲುತ್ತದೆ ಎಂದರು. ನಾನು ವಿಧಾನ‌ ಪರಿಷತ್ ಸದಸ್ಯನಾಗಿ ಸ್ವಗ್ರಾಮ ಉಚ್ಚಂಗಿಪುರ ಗ್ರಾಮದಲ್ಲಿ 4.50 ಕೋಟಿ ರೂ. ವೆಚ್ಚದಲ್ಲಿ  ಸರ್ಕಾರಿ ಮಾದರಿ ಶಾಲೆ  ನಿರ್ಮಿಸುತ್ತಿದ್ದೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಪ.ಪಂ ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ, ಜಿ.ಪಂ ಮಾಜಿ ಸದಸ್ಯರಾದ ಎಸ್.ಕೆ.ಮಂಜುನಾಥ್, ಸೊಕ್ಕೆ ನಾಗರಾಜ್, ಬಿ.ಸಿದ್ದಪ್ಪ, ಬಿಸ್ತುವಳ್ಳಿ ಬಾಬು, ಕೃಷ್ಣಮೂರ್ತಿ, ಡಿ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಮುಖಂಡರಾದ ಮಂಜುನಾಥಯ್ಯ, ಅಜಯ್ ಬಣಕಾರ್, ಪೂಜಾರ್ ಸಿದ್ದಪ್ಪ, ಗಡಿಮಾಕುಂಟೆ ಸಿದ್ದೇಶ್, ಬಕ್ಕೇಶ್ ಪಟೇಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹೆಚ್.ಎಂ.ಸ್ವಾಮಿ, ಎಇಇ ಸಾಧಿಕ್ ಉಲ್ಲಾ, ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

error: Content is protected !!