ದೇಶದ ಪ್ರಗತಿಗೆ ಮಹಿಳೆಯರ ಕೊಡುಗೆ ಅಪಾರ

ದೇಶದ ಪ್ರಗತಿಗೆ ಮಹಿಳೆಯರ ಕೊಡುಗೆ ಅಪಾರ

ಜಗಳೂರಿನ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ.ಪಂ ಉಪಾಧ್ಯಕ್ಷೆ ನಿರ್ಮಲ

ಜಗಳೂರು, ಮಾ.8- ಸ್ವಾತಂತ್ರ್ಯ ಪೂರ್ವ ದಿಂದಲೂ ದೇಶಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ ತಿಳಿಸಿದರು.

ಪಂಚಾಯಿತಿ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿದ್ದ `ವಿಶ್ವ ಮಹಿಳಾ ದಿನಾಚರಣೆ’  ಸಮಾರಂಭದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದ ಫಲವಾಗಿ ಮಹಿಳೆಯರು ಶಿಕ್ಷಣದ ಜೊತೆ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ.  ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ದಿಗೆ ಕುಟುಂಬದಲ್ಲಿ ಪುರುಷರ ಸಹಕಾರ ಅಗತ್ಯ ಎಂದು ಹೇಳಿದರು.

ಪ.ಪಂ ಸದಸ್ಯೆ ಮಂಜಮ್ಮ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಸಾಗಿಸಬೇಕು. ಪುರುಷರ ಜೊತೆಗೆ ಆರ್ಥಿಕ ಸಬಲೀಕರಣಕ್ಕೆ ಮಹಿಳೆಯರ ಶ್ರಮವೂ ಅಗತ್ಯ ಎಂದು ಅಭಿಪ್ರಾಯಿಸಿದರು‌.

ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಮಹಿಳೆ ಆಧುನಿಕವಾಗಿ ಅಬಲೆಯಲ್ಲ, ಸಬಲೆ  ಎಂಬುದನ್ನು ಸಾಬೀತು ಮಾಡಿದ್ದು, ಕೌಟುಂಬಿಕ ಒತ್ತಡದ ಮಧ್ಯೆ, ಮಕ್ಕಳ ಲಾಲನೆ, ಪಾಲನೆ ಜೊತೆಗೆ ಪ್ರತಿ ಕ್ಷೇತ್ರದಲ್ಲಿಯೂ ತನ್ನದೇ ಛಾಪು ಮೂಡಿಸಿದ್ದಾಳೆ ಎಂದು ಪ್ರಶಂಸಿಸಿದರು.

 ಪಟ್ಟಣ ಪಂಚಾಯಿತಿಯಲ್ಲಿ  ಸೇವೆಗೈಯ್ಯುತ್ತಿರುವ ಮಹಿಳೆಯರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್  ವಹಿಸಿದ್ದರು.

ಸದಸ್ಯರಾದ ಲೋಲಾಕ್ಷಮ್ಮ, ಲಲಿತ ಶಿವಣ್ಣ, ಮಹಿಳಾ ಸ್ವಸಹಾಯ ಸಂಘದ ಅಂಬುಜಾ, ಆರೋಗ್ಯ ನಿರೀಕ್ಷಕ ಖಿಫಾಯತ್, ಕಂದಾಯ ನಿರೀಕ್ಷಕ ಮೊಹಿದ್ದೀನ್, ಮುಖಂಡರಾದ ಓಬಳೇಶ್ ಮುಂತಾದವರು ಇದ್ದರು.

error: Content is protected !!