ಹೊನ್ನಾಳಿ, ಮಾ.27- ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ರಾಜ್ಯ ಬಿಜೆಪಿ ಸರ್ಕಾರದ ತೀರ್ಮಾನವನ್ನು ತಾಲ್ಲೂಕು ಕುರುಬ ಸಮಾಜ ಸ್ವಾಗತಿಸಿದೆ ಎಂದು ತಾಲ್ಲೂಕು ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಕುಬೇರಪ್ಪ ಹೇಳಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಕುರುಬ ಸಮಾಜದ ಮುಖಂಡರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಲುವಾಗಿ ಮೈಸೂರು ವಿಶ್ವವಿದ್ಯಾಲಯದ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯವರು ಕುಲಶಾಸ್ತ್ರೀಯ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದು, ಈ ಹಂತದಲ್ಲಿ ಯಾವುದೇ ವಿಳಂಬ ಮಾಡದೇ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸಕಾರಾತ್ಮಕ ನಿರ್ಣಯ ತೆಗೆದುಕೊಂಡು ಎಸ್ಟಿ ಮೀಸಲಾತಿ ಪಟ್ಟಿಗೆ ಪರಿಗಣಿಸಲು ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಹಾಗಾಗಿ, ಸರ್ಕಾರವನ್ನು ಕುರುಬ ಸಮಾಜದ ವತಿಯಿಂದ ಅಭಿನಂದಿಸಲಾಗುವುದು ಎಂದು ಹೇಳಿದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಕೆ.ವಿ.ಚನ್ನಪ್ಪ ಮಾತನಾಡಿ, ಕುರುಬ ಸಮಾಜ ಇನ್ನೂ ಕೂಡ ಶೈಕ್ಷಣಿಕ, ಸಾಮಾಜಿಕ, ಅರ್ಥಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಕುರಿಗಳನ್ನು ಸಾಕಿಕೊಂಡು ಜೀವನಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಆಲೆದಾಡುತ್ತಾ ಪ್ರಾಕೃತಿಕ ಅಪಾಯಗಳನ್ನು ಲೆಕ್ಕಿಸದೇ ಕುರಿಗಳೊಂದಿಗೆ ಹೊಲ, ಗದ್ದೆ, ಕಾಡುಗಳಲ್ಲಿಯೇ ತಮ್ಮ ಕುಟುಂಬದೊಂದಿಗೆ ವಾಸ ಮಾಡುತ್ತಾ ಜೀವನ ಸಾಗಿಸುವ ಅತೀ ಹಿಂದುಳಿದ ಜನಾಂಗವಾಗಿದೆ ಎಂದು ಹೇಳಿದರು.
ಮುಖಂಡ ಪ್ರಭು ಮಾತನಾಡಿ, ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಕರ್ನಾಟಕದ ಎಲ್ಲಾ ಸಂಸದರು ಸೇರಿ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸುವಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮನವಿ ಮಾಡಿದರು.
ಸಮಾಜದ ಗೌರವಾಧ್ಯಕ್ಷ ದಿಡಗೂರು ಪಾಲಾಕ್ಷಪ್ಪ ಮಾತನಾಡಿ, ಕುರುಬ ಸಮಾಜವನ್ನು ಕೇಂದ್ರ ಸರ್ಕಾರ ಕೂಡಲೇ ಎಸ್ಟಿ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ಸುಮಾ ಮಂಜುನಾಥ ಇಂಚರ, ಮಾಜಿ ಅಧ್ಯಕ್ಷರುಗಳಾದ ಬಾಬೂ ಹೋಬಳದಾರ್, ರಂಗಪ್ಪ, ಮುಖಂಡ ಸತೀಶ್, ಮಾರಿಕೊಪ್ಪದ ಹನುಮಂತಪ್ಪ, ಮಾರಿಕೊಪ್ಪದ ಚಿನ್ನಪ್ಪ, ಮಂಜುನಾಥ್ ಇಂಚರ ಸೇರಿದಂತೆ ಕುರುಬ ಸಮಾಜದ ಮುಖಂಡರು ಇದ್ದರು.