ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ಶ್ರೀ ಬಸವೇಶ್ವರ ರಥೋತ್ಸವ

ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ಶ್ರೀ ಬಸವೇಶ್ವರ ರಥೋತ್ಸವ

ಹೊನ್ನಾಳಿ, 5 – ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ  ಶ್ರೀ ಬಸವೇಶ್ವರ ದೇವರ ರಥೋತ್ಸವ ಮತ್ತು ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ನಿನ್ನೆ ವಿಜೃಂಭಣೆಯಿಂದ ನೆರವೇರಿತು. 

ವೀರಗಾಸೆ ಕಲಾವಿದರ ನೃತ್ಯ, ವಿವಿಧ ವಾದ್ಯಮೇಳಗಳ ಮಂಗಳಘೋಷ ರಥೋತ್ಸವದ ಸಂಭ್ರಮಕ್ಕೆ ಮೆರುಗು ನೀಡಿದವು. ಅಲಂಕೃತ ರಥಕ್ಕೆ ಭಕ್ತರು ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ರಥ ಮುಂದಕ್ಕೆ ಚಲಿಸಿದ ನಂತರ ಭಕ್ತರು ನೆಲದ ಮೇಲೆ ಬಿದ್ದ ಮೆಣಸಿನಕಾಳುಗಳನ್ನು ಆಯ್ದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಗ್ರಾಮದಲ್ಲಿ ಬೆಲ್ಲದ ಬಂಡಿ ಮೆರವಣಿಗೆ ನಡೆಯಿತು. ನಂತರ ಓಕುಳಿ ಆಡಲಾಯಿತು. ಯುವಕರು ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಸಂಭ್ರಮಿಸಿದರು. ಸಂಜೆ  ಶ್ರೀ ಬಸವೇಶ್ವರ ದೇವರ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ವಾದ್ಯಮೇಳಗಳೊಂದಿಗೆ ನೆರವೇರಿತು.

ಹರಕೆ ಹೊತ್ತ ಭಕ್ತರು ಕುಟುಂಬದವರೊಂದಿಗೆ ಆಗಮಿಸಿ ತಮ್ಮ ಮಕ್ಕಳ ಜವುಳ ಕಾರ್ಯವನ್ನು ಸ್ವಾಮಿಯ ಸನ್ನಿಧಿಯಲ್ಲಿ ನೆರವೇರಿಸಿದರು. 

error: Content is protected !!