ಚಿಕ್ಕಹಾಲಿವಾಣದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗುಳ

ಚಿಕ್ಕಹಾಲಿವಾಣದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗುಳ

ಹೊನ್ನಾಳಿ, ಫೆ.6- ತಾಲ್ಲೂಕಿನ ಚಿಕ್ಕಹಾಲಿವಾಣ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗುಳ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸೋಮವಾರ ಬೆಳಿಗ್ಗೆ 6ರಿಂದ 10ರವರೆಗೆ ಪುರವಂತರಿಂದ  ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗುಳ ನೆರವೇರಿತು. ಹರಕೆ ಹೊತ್ತ ಮಹಿಳೆಯರು ರಾಣೇಬೆನ್ನೂರಿನ ಪುರವಂತರಾದ ಬಸವಣ್ಯಪ್ಪ ಮತ್ತು ಸಂಗಡಿಗರಿಂದ ಶಸ್ತ್ರಗಳನ್ನು ಹಾಕಿಸಿಕೊಳ್ಳತ್ತಿದ್ದ ದೃಶ್ಯ ರೋಮಾಂಚನಕಾರಿ ಯಾಗಿತ್ತು. ವಿವಿಧ ದೇವರುಗಳ ಉತ್ಸವ ಮೂರ್ತಿಗಳು ಪಲ್ಲಕ್ಕಿ ಯಲ್ಲಿ ಪ್ರದಕ್ಷಿಣೆ ಹಾಕಿದ ನಂತರ, ಕೆಂಡಾರ್ಚನೆ ನಡೆಯಿತು. ನೂರಾರು ಭಕ್ತರು ಕೆಂಡ ಹಾಯ್ದರು. ಬಳಿಕ ಮಹಾ ಪ್ರಸಾದ ನಡೆಯಿತು.

ಹರಿಹರ ತಾಲ್ಲೂಕಿನ ಹಿರೇಹಾಲಿವಾಣ ಗ್ರಾಮದ ಶ್ರೀ ಹಾಲೇಶ್ವರ ಸ್ವಾಮಿ, ಶ್ರೀ ಕರಿಯಮ್ಮ ದೇವಿಯರ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು. 

ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಜವುಳ ಕಾರ್ಯಕ್ರಮ ನಡೆಯಿತು. ರಾತ್ರಿ 7ರಿಂದ 10ರವರೆಗೆ ಅಡ್ಡಪಲ್ಲಕ್ಕಿ ಉತ್ಸವ ಪಾರಂಪರಿಕ ಶ್ರದ್ಧಾ-ಭಕ್ತಿ-ವೈಭವಗಳಿಂದ ನೆರವೇರಿತು. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳು ಸೇರಿದಂತೆ, ನಾಡಿನ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು  ಪಾಲ್ಗೊಂಡರು.

ಹಿರೇಹಾಲಿವಾಣ, ಹೊನ್ನಾಳಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಯರೇಹಳ್ಳಿ, ಯಕ್ಕನ ಹಳ್ಳಿ, ಕೂಲಂಬಿ, ಕುಂದೂರು, ಚಿಕ್ಕೇರಹಳ್ಳಿ, ದೊಡ್ಡೇರಹಳ್ಳಿ, ಹರಿಹರ ತಾಲೂಕಿನ ಮಲೇ ಬೆನ್ನೂರು, ಹರಳಹಳ್ಳಿ ಮತ್ತಿತರ ಗ್ರಾಮಗಳ ಜನತೆ, ಶ್ರೀ ವೀರಭದ್ರೇಶ್ವರ ಸ್ವಾಮಿ ಒಕ್ಕಲಿನ ನೂರಾರು ಕುಟುಂಬಸ್ಥರು ಆಗಮಿಸಿದ್ದರು.

ಹಿರೇಹಾಲಿವಾಣ ಗ್ರಾಮದ ಶ್ರೀ ಈಶ್ವರಸ್ವಾಮಿ ಸಂಘದ ಸದಸ್ಯರು ಉಚಿತವಾಗಿ ಅಡುಗೆ ತಯಾರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಎಲ್ಲ ಭಕ್ತರಿಗೂ ಪ್ರಸಾದದ  ವ್ಯವಸ್ಥೆ ಕಲ್ಪಿಸಲಾಗಿತ್ತು.

error: Content is protected !!