ತಂಬಾಕು ಬಳಕೆಯಿಂದ ವಾರ್ಷಿಕ 14 ಲಕ್ಷ ಸಾವು

ತಂಬಾಕು ಬಳಕೆಯಿಂದ ವಾರ್ಷಿಕ 14 ಲಕ್ಷ ಸಾವು

 `ವಿಶ್ವ ತಂಬಾಕು ರಹಿತ ದಿನಾಚರಣೆ’ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್

ಹೊನ್ನಾಳಿ, ಜೂ 10- ತಂಬಾಕು ಸೇವನೆಯಿಂದ ಭಾರತ ದೇಶದಲ್ಲಿ ವಾರ್ಷಿಕ ಸುಮಾರು 14 ಲಕ್ಷದಷ್ಟು ಸಾವುಗಳು ಆಗುತ್ತಿವೆ. ಇವರಲ್ಲಿ ಯುವಕರು ಮತ್ತು ಮಧ್ಯ ವಯಸ್ಕರೇ ಹೆಚ್ಚು ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಆತಂಕ ವ್ಯಕ್ತಪಡಿಸಿದರು. 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೊನ್ನಾಳಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಾವಣಗೆರೆ ಜಿಲ್ಲೆ ವತಿಯಿಂದ ಹೊನ್ನಾಳಿ ಹೆಚ್ ಕಡದಕಟ್ಟೆಯ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಾಡಾಗಿದ್ದ `ವಿಶ್ವ ತಂಬಾಕು ರಹಿತ ದಿನಾಚರಣೆ’ ಕಾರ್ಯಕ್ರಮದ ಪ್ರಧಾನ ಉಪನ್ಯಾಸಕರಾಗಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಸುಮಾರು 27 ಕೋಟಿಯಷ್ಟು ಮಂದಿ ಧೂಮಪಾನ, ಗುಟ್ಕಾ, ಜರ್ದಾ ಸೇವನೆ ಮುಂತಾದ ವಿವಿಧ ಬಗೆಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದು, ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್, ಹೃದಯ ಬೇನೆ, ಪಾರ್ಶ್ವವಾಯು, ದ್ವಿತೀಯ ಬಗೆಯ ಮಧುಮೇಹ ಮುಂತಾದ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದ್ದಾರೆ.

ಬೀಡಿ, ಸಿಗರೇಟಿನ ಹೊಗೆಯಲ್ಲಿ ಸುಮಾರು ಏಳು ಸಾವಿರ ಬಗೆಯ ವಿಷಕಾರಿ ರಾಸಾಯನಿಕಗಳ ಮಿಶ್ರಣವಿದ್ದು, ತಂಬಾಕಿನ ನಿಕೋಟಿನ್‌ ಚಟ ಹುಟ್ಟಿಸುವ ವಿಷವಾಗಿದೆ. ಇದು ದೇಹವನ್ನು ಪ್ರವೇಶಿಸಿದಾಗ ಹೃದಯದ ಆಮ್ಲಜನಕ ಬಳಕೆ ಹೆಚ್ಚಾಗುತ್ತದೆ. ಇದರಿಂದಾಗಿ ಏನೋ ಒಂದು ಆರಾಮದ ಅನುಭವವಾಗುತ್ತದೆ, ಆದರೆ ಧೂಮಪಾನವು ಶ್ವಾಸಕೋಶವನ್ನು ಸೇರಿ ಅಪಾಯಕಾರಿ ಜೀವಕೋಶಗಳನ್ನು ವೃದ್ಧಿ ಮಾಡುವುದಲ್ಲದೆ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ ಎಂದರು.

ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾಗುತ್ತಿ ರುವವರಲ್ಲಿ  ಶೇ.90ರಷ್ಟು ಧೂಮಪಾನಿಗಳೇ ಆಗಿದ್ದಾರೆ ಎಂದ  ಅವರು,  ಧೂಮಪಾನ ಹಾಗೂ ತಂಬಾಕು ಗುಟ್ಕಾ ಸೇವನೆಯಿಂದಾಗಿ ಮೆದುಳಿನ ರಕ್ತನಾಳಗಳ ಒಡೆಯುವಿಕೆ ಆಗಿ ಪಾರ್ಶ್ವವಾಯು ಉಂಟಾಗುವ  ಸಂಭವವಿರು ತ್ತದೆ, ಹೃದಯಬೇನೆ ಹಾಗೂ ಅಸ್ತಮಾಕ್ಕೂ  ಕಾರಣವಾಗಬಹುದು ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹೆಚ್. ಬಾಬು ಅವರು,  ದುಶ್ಚಟಗಳನ್ನು ಬಿಡಲು ದೃಢಸಂಕಲ್ಪ ಬೇಕು. ದುರಭ್ಯಾಸಗಳಿಂದ ದೂರವಿರಬೇಕು ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಬೇಕು ಎಂದರು.              

 ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಿ.ಎಲ್. ಕುಮಾರಸ್ವಾಮಿ ಅವರು, ಸರ್ಕಾರಗಳು ಸರಿಯಾದ ಅಭಿವೃದ್ಧಿ ಪೂರಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಲ್ಲಿ ಮಾತ್ರ ಉತ್ತಮ ಭವಿಷ್ಯ ಸಾಧ್ಯ ಎಂದರು.          

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಸುರೇಶ ಹೊಸಕೇರಿ  ಮಾತನಾಡಿ, ಮಾದರಿಯುತ ನಡೆಯಿಂದ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು ಎಂದರು. 

ವಿಜಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ವಸಂತ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರುಗಳಾದ ನಾಗರಾಜ್ ಕತ್ತಿಗೆ, .ರುದ್ರೇಶ್ ಜಿ.ವಿ, ನಟರಾಜ್ ಎಂ.ಯು.ಲಿಂಗರಾಜ ಹವಳದ್, ಸುನಿಲ್ ಕುಮಾರ್, ದೇವರಾಜ್, ಭಾರತಿ ಮುಂತಾದವರು ಉಪಸ್ಥಿತರಿದ್ದರು.

ಧನುಶ್ರೀ ಪ್ರಾರ್ಥಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿನ ಬಸವರಾಜ್ ನಿರೂಪಿಸಿದರು. 

error: Content is protected !!