ಹೊನ್ನಾಳಿ ಶಾಸಕ : ಡಿ.ಜಿ.ಶಾಂತನಗೌಡ
ಸೊರಟೂರು ಅಭಿಮಾನಿಗಳಿಂದ 1 ಕ್ವಿಂಟಾಲ್ ಬೇಳೆಯ ಹೋಳಿಗೆ ಸಿಹಿ ಸವಿದ ಗ್ರಾಮಸ್ಥರು
ಹೊನ್ನಾಳಿ, ಜೂ.10- ಹೊನ್ನಾಳಿಯಲ್ಲಿ ಗೆದ್ದಿರುವ ಶಾಸಕರು ಯಾರೆಂದು ವಿಧಾನಸಭೆ ಯಲ್ಲಿ ಆಡಳಿತ ಪಕ್ಷದವರೊಂದಿಗೆ ವಿರೋಧ ಪಕ್ಷದವರೂ ಕೈ ಕುಲುಕಿ ಶುಭ ಹಾರೈಸುತ್ತಿರುವ ಈ ಕೀರ್ತಿಯು ತಾಲ್ಲೂಕಿನ ಮತದಾರರಿಗೆ ಸೇರಬೇಕೆಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಅವರು ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದರು.
ಶನಿವಾರ ಗ್ರಾಮದ ಆಂಜನೇಯ ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಸನ್ಮಾನಿಸುತ್ತಿರುವುದು ಹೆಚ್ಚು ಹರ್ಷ ಸಂದಿದೆ. ಮುಖ್ಯಮಂತ್ರಿ ಮತ್ತು ಉಪ-ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಶನಿವಾರದಂದೇ, ಮತ್ತೊಂದು ಶನಿವಾರ ಇತರೆ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರೆ, ಈ ಶನಿವಾರ ನನ್ನನ್ನು ಅಭಿನಂದಿಸುತ್ತಿರುವುದು ಶುಭ ದಿನವಲ್ಲವೆಂಬ ತಪ್ಪು ಕಲ್ಪನೆಯಿಂದ ಹೊರಬರಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಲು ಮುಂದಾಗಿದೆ. ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಕಾಂಗ್ರೆಸ್ ಪಕ್ಷದ ಭರವಸೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಮತದಾರರು ನಂಬದಿರುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಎಂ.ಆರ್.ಮಹೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಲು ಮುಂದಾಗಿದೆ. ಮಾಜಿ ಶಾಸಕ ರೇಣುಕಾಚಾರ್ಯ ನೀವು ನೀಡಿದ 4 ಭರವಸೆಗಳನ್ನು ಯಾವಾಗ ಈಡೇರಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿ, ಹೊನ್ನಾಳಿಯ ಪುರಸಭೆ ಚುನಾವಣೆ ಸಂದರ್ಭದಲ್ಲಿ ನಿವೇಶನ ನೀಡುವುದಾಗಿ ಹೊನ್ನಾಳಿ ಪಟ್ಟಣದ ನಿವಾಸಿಗಳಿಂದ 2000 ಅರ್ಜಿ ಪಡೆದಿದ್ದು ಇಲ್ಲಿಯವರೆಗೂ ವಿತರಿಸಿಲ್ಲವೇಕೆ? ಎಂದು ಪ್ರಶ್ನಿಸಿದರು.
ಹೊನ್ನಾಳಿ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೊಳಂಬ ಮತ್ತು ಕುಂಚಿಟಿಗ ಸಮಾಜಗಳ ಸಮುದಾಯ ಭವನಕ್ಕೆ ತಲಾ 2.5 ಕೋಟಿ ಅನುದಾನವನ್ನು ಗೆದ್ದರೂ, ಸೋತರೂ ಕೊಡುವೆ ಎಂದಿದ್ದೀರಿ. ಈವರೆಗೂ ಕೊಟ್ಟಿರುವಿರಾ, ಇತ್ತೀಚಿನ ಕುರುಬ ಸಮಾವೇಶದಲ್ಲಿ ಸಚಿವರಾಗಿದ್ದ ಎಂ.ಟಿ.ಬಿ.ನಾಗರಾಜ್ ಹೊನ್ನಾಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಕುರುಬ ಸಮಾಜಕ್ಕೆ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದ್ದು, ಇಲ್ಲಿಯವರೆಗೂ ಯಾಕೆ ನೀಡಿಲ್ಲ? ನೀವು ನೀಡಿದ್ದ ಈ ನಾಲ್ಕು ಭರವಸೆಗಳನ್ನು ಮೊದಲು ಈಡೇರಿಸಿ ಎಂದು ಸಭೆ ಮೂಲಕ ಒತ್ತಾಯಿಸುವುದಾಗಿ ಹೇಳಿದರು.
ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ನಾಗಪ್ಪ ಮಾತನಾಡಿ, ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ಮಂಜೂರಾಗಿದ್ದು ಈವರೆಗೂ ಏಕೆ ನೆನೆಗುದಿಗೆ ಬಿದ್ದಿದೆ ? ಹೊನ್ನಾಳಿಗೆ ಮಂಜೂರಾಗಿದ್ದ ಫುಡ್ ಫ್ಯಾಕ್ಟರಿ ಶಿಕಾರಿಪುರದಲ್ಲಿ ಸ್ಥಾಪಿತವಾಗಿದ್ದು ಏಕೆ? ಎಂಬುದನ್ನು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಸೊರಟೂರು ಗ್ರಾಮಸ್ಥರು 1 ಕ್ವಿಂಟಾಲ್ ಬೇಳೆಯಲ್ಲಿ ಸಿದ್ಧಗೊಂಡ ಹೋಳಿಗೆಯ ಸಿಹಿ ಸವಿದಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎಸ್.ರಂಜಿತ್, ಕಾಂಗ್ರೆಸ್ ಮುಖಂಡರುಗಳಾದ ಅರಾಕ್ ಸಿದ್ದಪ್ಪ, ಎಚ್.ಎ.ಉಮಾಪತಿ, ಸೊರಟೂರು ಗ್ರಾ.ಪಂ.ಅಧ್ಯಕ್ಷೆ ಸುಮಾ ಕುಮಾರ್, ಉಪಾಧ್ಯಕ್ಷೆ ನಾಗರತ್ನಬಾಯಿ, ಸದಸ್ಯರಾದ ಹಾಲಮ್ಮ ಹನುಮಂತಪ್ಪ, ಕೆಂಚಮ್ಮ ಕುಮಾರ್, ಮರಿಯಪ್ಪ ಕಲ್ಯಾಣಿ, ಪರಶುರಾಮರಾವ್, ವಿರುಪಾಕ್ಷಪ್ಪ, ರಾಮರಾವ್, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಹನುಮಂತಪ್ಪ ಕಾಕಳೆ, ಗ್ರಾಮದ ಮುಖಂಡರಾದ ಜಿ.ಶಿವನಗೌಡ, ನಿವೃತ್ತ ಶಿಕ್ಷಕ ಚಂದ್ರಪ್ಪ, ಹನುಮಂತಪ್ಪ ದೊಗ್ಗಳ್ಳಿ, ಬಸವನಗೌಡ ಪಾಟೀಲ್ ಸೊರಟೂರು ಅಕ್ಕ-ಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.