ಮಲೇಬೆನ್ನೂರು, ಏ.3- ಜಿ.ಬೇವಿನಹಳ್ಳಿ ಗ್ರಾಮದ ಗೌರಮ್ಮ ಎಂಬ ಅಂಗವಿಕಲೆ ಹಾಗೂ ವೃದ್ಧ ಮಹಿಳೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ `ವಾತ್ಸಲ್ಯ’ ಕಾರ್ಯಕ್ರಮದಡಿಯಲ್ಲಿ ನಿರ್ಮಿಸಿರುವ ನೂತನ ಮನೆಯನ್ನು ಸೋಮವಾರ ಯೋಜ ನೆಯ ಜಿಲ್ಲಾ ನಿರ್ದೇಶಕ ವಿ. ವಿಜಯಕುಮಾರ್ ನಾಗನಾಳ್ ಹಸ್ತಾಂತರ ಮಾಡಿದರು.
ಅಲ್ಲದೆ, ಈ ವೇಳೆ ಗೌರಮ್ಮ ಅವರನ್ನು ಸನ್ಮಾನಿಸಿ, ಯುಗಾದಿ ಹಬ್ಬದ ಅಂಗವಾಗಿ ಬಟ್ಟೆ ಸೇರಿದಂತೆ ಗೃಹ ಬಳಕೆಯ ಅಗತ್ಯ ವಸ್ತುಗಳ `ವಾತ್ಸಲ್ಯ’ ಕಿಟ್ ವಿತರಿಸಿ, ಮಾಸಾಶನ ವೇತನವನ್ನು ಒಂದು ಸಾವಿರಕ್ಕೆ ಹೆಚ್ಚಿಸುವುದಾಗಿ ವಿಜಯಕುಮಾರ್ ತಿಳಿಸಿದರು.
`ವಾತ್ಸಲ್ಯ’ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆಯ ದಾವಣಗೆರೆ, ಹೊನ್ನಾಳಿ, ಹರಿಹರ ತಾಲ್ಲೂಕುಗಳಲ್ಲಿ ಇದುವರೆಗೆ 25 ಹೊಸ ಮನೆಗಳನ್ನು ಅಸಹಾಯಕರಿಗೆ ನಿರ್ಮಿಸಿಕೊಟ್ಟಿದ್ದೇವೆ. 21 ಮನೆಗಳನ್ನು ರಿಪೇರಿ ಮಾಡಿಸಿ ಮತ್ತು 20 ಮನೆಗಳಿಗೆ ಶೌಚಾಲಯ, ಸ್ನಾನ ಗೃಹ ಕಟ್ಟಿಸಿಕೊಟ್ಟಿದ್ದೇವೆ ಎಂದು ವಿಜಯಕುಮಾರ್ ನಾಗನಾಳ್ `ಜನತಾವಾಣಿ’ಗೆ ತಿಳಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ. ಮಹೇಶ್ವರಪ್ಪ, ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಜಿಗಳಿ ವಲಯ ಮೇಲ್ವಿಚಾರಕಿ ಶ್ರೀಮತಿ ಪದ್ಮಾವತಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ರಕ್ಷಿತಾ, ಸೇವಾ ಪ್ರತಿನಿಧಿ ಸವಿತಾ, ಒಕ್ಕೂಟಗಳ ಅಧ್ಯಕ್ಷ ಎ.ಕೆ. ಸೋಮಶೇಖರ್, ಮಮತಾ, ಗ್ರಾ.ಪಂ. ಸದಸ್ಯ ದೇವರಾಜ್, ಪತ್ರಕರ್ತ ಜಿಗಳಿ ಪ್ರಕಾಶ್ ಈ ವೇಳೆ ಹಾಜರಿದ್ದರು.