ಮಲೇಬೆನ್ನೂರು, ಮಾ.27- ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ಪೋಷಣೆಗಾಗಿ ಸರಿಯಾದ ಕ್ರಮದಲ್ಲಿ ಮಗುವಿಗೆ ಯಾವ ರೀತಿ ಪೂರಕ ಆಹಾರ ಸಿದ್ಧಪಡಿಸಬೇಕು ಎಂಬುದನ್ನು ಪೋಷಕರು ತಿಳಿಯಬೇಕು ಎಂದು ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಹೇಳಿದರು.
ಸೋಮವಾರ ಬಿಳಸನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಮಲಾಪುರದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪೌಷ್ಟಿಕತೆಯನ್ನು ಯಾವ ರೀತಿ ತಡೆಗಟ್ಟಬೇಕು ಎಂಬ ಬಗ್ಗೆ ತಿಳಿದುಕೊಂಡು, ಸರಿಯಾದ ಆಹಾರವನ್ನು ತಯಾರಿಸಿ ಮಗುವಿಗೆ ಉಣಬಡಿಸಿದರೆ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ. ಮಕ್ಕಳ ತೂಕ, ಎತ್ತರ, ಕೈ ಸುತ್ತಳತೆ ಮತ್ತು ಲಸಿಕೆ ಹಾಕಲಾಗಿದೆಯೇ ಎಂಬುವುದನ್ನು ಪರಿಗಣಿಸಿ ಅಂತಹ ಮಗುವನ್ನು ಆರೋಗ್ಯವಂತ ಮಗು ಎಂದು ಗುರುತಿಸಲಾಗುತ್ತದೆ. ಮಗು ಹುಟ್ಟಿನಿಂದ ಆರು ತಿಂಗಳವರೆಗೆ ತಾಯಿಯ ಎದೆ ಹಾಲನ್ನು ಮಾತ್ರ ನೀಡಬೇಕು. ಆರು ತಿಂಗಳ ನಂತರ ಪೂರಕ ಆಹಾರ ನೀಡಲು ಪ್ರಾರಂಭಿಸಿ ಎಂದು ಸಲಹೆ ನೀಡಿದರು.
ಎಲ್ಲಾ ದ್ವಿದಳ ಧಾನ್ಯಗಳನ್ನು ನೆನೆಹಾಕಿ. ನೆನೆದ ನಂತರ ನೆರಳಿನಲ್ಲಿ ಒಣಗಿಸಿ. ಮಿಕ್ಸಿಯಲ್ಲಿ ಹಾಕಿ ಹಿಟ್ಟನ್ನು ತಯಾರಿಸಿಕೊಂಡು ಇಟ್ಟುಕೊಳ್ಳಿ, ಮಗುವಿಗೆ ಬೇಕಾದಾಗ ಆ ಹಿಟ್ಟನ್ನು ಬಳಸಿ ಸರಿಯಾದ ಪ್ರಮಾಣದಲ್ಲಿ ಉಪ್ಪು ಮತ್ತು ಬೆಲ್ಲ ಬೆರೆಸಿ ಮಾಲ್ಟ್ (ದ್ರವ ರೂಪದಲ್ಲಿ) ಸಿದ್ಧಪಡಿಸಿಕೊಂಡು ಮಗುವಿಗೆ ಉಣಬಡಿಸಿದ್ದಲ್ಲಿ ಮಕ್ಕಳು ಅತ್ಯುತ್ತ ಮವಾಗಿ ಬೆಳವಣಿಗೆಯಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಮಲ್ಲಿಕಾರ್ಜುನಪ್ಪ, ಶ್ರೀಮತಿ ಹಾಲಮ್ಮ, ಶ್ರೀಮತಿ ಎಲ್ಲಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಪುಷ್ಪ ಮತ್ತು ಆಶಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.