ಹರಿಹರ, ಮಾ. 24 – ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೋಸದ ಮಾತುಗಳಿಗೆ ಮರುಳಾಗದೆ ಜಾತ್ಯತೀತ ಮನೋಭಾವನೆ ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಮತ ಹಾಕುವಂತೆ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಮನವಿ ಮಾಡಿಕೊಂಡರು.
ನಗರದ ಬೆಂಕಿನಗರದಲ್ಲಿ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಸಭೆಯಲ್ಲಿ ವಿವಿಧ ಪಕ್ಷದವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬಡವರಿಗೆ 200 ಯೂನಿಟ್ ವಿದ್ಯುತ್ ಉಚಿತ. ಮಹಿಳೆಗೆ 2000 ಕೊಡುವ ಗ್ಯಾರಂಟಿ ನೀಡುತ್ತಿರುವ ಇವರಿಗೆ ಕಳೆದ 65 ವರ್ಷ ಆಡಳಿತ ನಡೆಸುವ ಸಂದರ್ಭದಲ್ಲಿ ಈ ಬಡ ವರು ನೆನಪಾಗಲಿಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರ ಎನ್ನುತ್ತಾ ನಾಯಕರು ಮಾತುಗಳಿಂದಲೇ ಜನರನ್ನು ಮರಳು ಮಾಡುತ್ತಾ ಹೊರಟಿದ್ದಾರೆ. ಈ ಸರ್ಕಾರಗಳಿಂದ ಬಡವರ ಬದುಕು ದುಸ್ತರವಾಗಿದೆ. ಸಿಲಿಂಡರ್, ಪೆಟ್ರೋಲ್, ಡೀಸೆಲ್, ರಸಗೊಬ್ಬರದ ದರಗಳು ಏರಿಕೆಯಾಗಿ ರೈತರು, ಬಡವರು ಬದುಕುವುದೇ ಕಷ್ಟ ಎಂಬಂತಾಗಿದೆ. ಹಾಗಾಗಿ ಕಾಂಗ್ರೆಸ್-ಬಿಜೆಪಿ ಪಕ್ಷಗಳನ್ನು ನಂಬಬೇಡಿ ಎಂದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಆಯ್ಕೆಯಾದ ನಂತರ ಕ್ಷೇತ್ರದ ಅಭಿವೃದ್ಧಿಯಲ್ಲಿ 10 ವರ್ಷದ ಹಿನ್ನಡೆಯಾಗಿದೆ. ನಗರದಲ್ಲಿ ಯಾವುದೇ ಮಾರುಕಟ್ಟೆಗಳ ನಿರ್ಮಾಣ ಮಾಡಲಿಲ್ಲ. ರಸ್ತೆಯ ಡಿವೈಡರ್ ಒಳಗೆ ಒಂದು ಗಿಡವನ್ನೂ ನೆಡಲಿಲ್ಲ. ಯಾವುದೇ ಅಭಿವೃದ್ಧಿಗಳನ್ನು ಮಾಡಬೇಕೆಂದರೆ ಬುದ್ದಿವಂತಿಕೆ ಬೇಕು ಅಂದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಹಾಗೂ ಸರ್ಕಾರದ ಯೋಜನೆಗಳನ್ನು ತರಲು ಸಾಧ್ಯ ಎಂದರು.
ಕಳೆದ 2018ರಲ್ಲಿ ಇಂದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದರು. ಆದರೆ ನಾನು ತಿರಸ್ಕರಿಸಿದ್ದೆ. ಅಂದು ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೆ, ಇಂದು ರಾಮಪ್ಪ ಶಾಸಕರು ಆಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.
ಕಳೆದ ಬಾರಿ ಗುಲಾಮ್ನಬೀ ಆಜಾದ್ ಹರಿಹರಕ್ಕೆ ಬಂದು ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದ ಹಾಗೆ ಎಂದು ಹೇಳಿದ್ದರು. ಇವತ್ತು ಅವರು ಕೂಡ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮೋಸದ ಮಾತುಗಳಿಗೆ ಮರುಳಾಗಬಾರದು ಎಂದವರು ಹೇಳಿದರು.
ಈ ವೇಳೆ ಜೆಡಿಎಸ್ ಮುಖಂಡ ಅಮಾನುಲ್ಲಾ, ನಗರಸಭಾ ಸದಸ್ಯರಾದ ಆರ್.ಸಿ ಜಾವೀದ್, ಬಿ.ಅಲ್ತಾಫ್, ಮಾಜಿ ಸದಸ್ಯ ಹಾಜಿ ಅಲಿ, ಮುಖಂಡರಾದ ಹನುಮಂತ ನಾಯಕ್, ವಾಹಿಬ್ ಸಾಬ್, ಮುಜಾಮಿಲ್, ಅಸ್ರಾಖಾನ್, ಅಜ್ಗರ್, ಹಜರತ್ ಮತ್ತಿತರರು ಉಪಸ್ಥಿತರಿದ್ದರು.