ಜಿಗಳಿ : ರಂಗನಾಥ ಸ್ವಾಮಿ ರಥೋತ್ಸವ

ಜಿಗಳಿ : ರಂಗನಾಥ ಸ್ವಾಮಿ ರಥೋತ್ಸವ

ಮಲೇಬೆನ್ನೂರು, ಮಾ. 6 – ಜಿಗಳಿ ಗ್ರಾಮದ ಆರಾಧ್ಯ ದೈವ  ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಸೋಮವಾರ ಬೆಳಗಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಶ್ರೀ ಬೀರ ಲಿಂಗೇಶ್ವರ ಸ್ವಾಮಿ, ಜಿ. ಬೇವಿನಹಳ್ಳಿ ಮತ್ತು ಯಲವಟ್ಟಿ ಗ್ರಾಮಗಳ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಸಮ್ಮುಖದಲ್ಲಿ ನಡೆದ ರಥೋತ್ಸವಕ್ಕೆ ವಿವಿಧ ಕಲಾ-ಮೇಳಗಳು ಮೆರಗು ತಂದವು. 

ರಥೋತ್ಸವದ ವೇಳೆ ಭಕ್ತರು ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು ಮತ್ತು ರಥದ ಮೇಲೆ ಬಾಳೆಹಣ್ಣು, ಮಂಡಕ್ಕಿ, ಮೆಣಸಿನ ಕಾಳು ಎಸೆದು ಭಕ್ತಿ ಸಮರ್ಪಿಸಿದರು.

ಹರಕೆ ಹೊತ್ತ ಭಕ್ತರು ದೀಡು ನಮಸ್ಕಾರ ಹಾಕಿದರು. ಬೆಳಿಗ್ಗೆ 10 ಗಂಟೆ ನಂತರ ಜವಳ, ಮದುವೆ, ನಡೆದವು. ಸಂಜೆ ಜಾತ್ರೆಯಲ್ಲಿ ಬೆಲ್ಲದ ಬಂಡಿ ಉತ್ಸವ ಗಮನ ಸೆಳೆಯಿತು.

ರಾತ್ರಿ ಓಕಳಿ ನಂತರ ಕಂಕಣ ವಿಸರ್ಜನೆ ಮಾಡಲಾಯಿತು. ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ಮರಾಠ ಸಮಾಜದ ವತಿಯಿಂದ 5ನೇ ವರ್ಷದ ಅನ್ನ ಸಂತರ್ಪಣೆ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗ್ರಾಮ ಸಹಾಯಕ ರಂಗನಾಥ್, ಟಿ.ಆರ್ ಧರ್ಮರಾಜ್, ಅರಕೆರೆ ಹನುಮಂತ, ದೊಡ್ಡ ಘಟ್ಟದ ರಂಗನಾಥ್, ಹುಸೇನಿ ಮತ್ತಿತರರು ಸೇರಿ 4ನೇ ವರ್ಷದ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು.  ಜಾತ್ರೆಯಲ್ಲಿ ಗ್ರಾಮದ ಉದ್ಯೋಗಸ್ಥ ಯುವಕರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.

ಮಂಗಳವಾರ ವಿವಿಧ ಕಾರ್ಯಕ್ರಮಗಳ ನಂತರ ಸಂಜೆ 7 ಗಂಟೆಯಿಂದ ಶ್ರೀ ರಂಗನಾಥ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಮತ್ತು ಜಿ. ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಭೂತನ ಸೇವೆಯ ನಂತರ ರಾಜಬೀದಿಗಳಲ್ಲಿ ವಿವಿಧ ಮುದ್ರೆಗಳೊಂದಿಗೆ ದೇವರುಗಳ ಉತ್ಸವ ನಡೆಯಲಿದೆ. 

error: Content is protected !!