ಹರಿಹರ, ಮಾ. 4 – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ನಗರಕ್ಕೆ ಇದೇ ದಿನಾಂಕ 11 ರಂದು ಆಗಮಿಸಲಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಬಡವರಿಗೆ, ಶೋಷಿತರಿಗೆ, ದಲಿತರಿಗೆ, ಅಸ್ಪೃಶ್ಯರಿಗೆ ಉಪಯೋಗ ಆಗುವಂತಹ ಕಾರ್ಯವನ್ನು ಮಾಡದೇ ತಮಗೆ ಅನುಕೂಲ ಆಗುವ ರೀತಿಯಲ್ಲಿ ಆಡಳಿತವನ್ನು ಮಾಡುತ್ತಾ ವ್ಯಾಪಕವಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ರಾಮಪ್ಪ ಆರೋಪಿಸಿದರು.
ಈ ಬಗ್ಗೆ ಅರಿವು ಮೂಡಿಸಲಿರುವ ಪ್ರಜಾಧ್ವನಿ ಯಾತ್ರೆ ದಿನಾಂಕ 11 ರಂದು ಮಧ್ಯಾಹ್ನ 3 ಗಂಟೆಗೆ ಬೈಪಾಸ್ ರಸ್ತೆಯ ಮೂಲಕ ಆಗಮಿಸಲಿದೆ. ಬೃಹತ್ ಬೈಕ್ ರಾಲಿ ಮೂಲಕ ಪ್ರಜ್ವಾಧ್ವನಿ ಯಾತ್ರೆಯನ್ನು ಬರ ಮಾಡಿಕೊಳ್ಳಲಾಗುತ್ತದೆ. ನಂತರ ಗಾಂಧಿ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಮಾರಂಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳೆ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಜಮೀರ್ ಆಹ್ಮದ್, ಹೆಚ್. ಆಂಜನೇಯ ಸೇರಿದಂತೆ ಹಲವಾರು ನಾಯಕರು ಭಾಗವಹಿಸಲಿದ್ದಾರೆ.
ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಬಿಜೆಪಿ ಪಕ್ಷದವರ ಆಡಳಿತವನ್ನು ನೋಡಿ ಜನರು ಬಹಳ ರೋಸಿ ಹೋಗಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ ಮಾತನಾಡಿ, ಪ್ರಜಾಧ್ವನಿ ಯಾತ್ರೆಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಾಜಿ ನಗರಸಭೆ ಸದಸ್ಯ ಬಿ.ಕೆ. ರೆಹಮಾನ್ ಖಾನ್ ಮಾತನಾಡಿ, ದೇಶದ ಗತಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಆಗದೆ ಸಬ್ ಕಾ ಬರ್ ಬಾದ್ ಆಗಿ ಪರಿವರ್ತನೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುರೇಶ್ ಹಾದಿಮನಿ, ಎಲ್. ಬಿ.ಹನುಮಂತಪ್ಪ, ಅಭಿದಾಲಿ, ಏಜಾಜ್ ಆಹ್ಮದ್, ಮಹಮ್ಮದ್ ಫೈರೋಜ್, ವಿದ್ಯಾ, ಭಾಗ್ಯಮ್ಮ, ಏಕಾಂತಪ್ಪ, ನೇತ್ರಾವತಿ, ಕೆ.ಪಿ.ಗಂಗಾಧರ್, ಬಿ.ಎನ್ ರಮೇಶ್, ಹಬೀಬ್, ನಜೀರ್, ರಮೇಶ್ ನಾಯ್ಕ್ ಇತರರು ಹಾಜರಿದ್ದರು.