ಕೊನೆಭಾಗಕ್ಕೆ ತಲುಪದ ನೀರು

ಕೊನೆಭಾಗಕ್ಕೆ ತಲುಪದ ನೀರು

ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದ ಪವಿತ್ರ ರಾಮಯ್ಯ

ನೀರಾವರಿ ಕಚೇರಿಯಲ್ಲಿ ಇಂಜಿನಿಯರ್‌ಗಳ ವಿರುದ್ಧ ರೈತರ ಆಕ್ರೋಶ

ಮಲೇಬೆನ್ನೂರು, ಮಾ. 1 – ಭದ್ರಾ ಜಲಾಶಯ ತುಂಬಿದ್ದರೂ ಅಚ್ಚುಕಟ್ಟಿನ ಕೊನೆಭಾಗದಭತ್ತದ ಗದ್ದೆಗಳಿಗೆ ನಿಗದಿತ ಪ್ರಮಾಣ ದಲ್ಲಿ ನೀರು ಹರಿದಬರುತ್ತಿಲ್ಲ, ನೀರಿನ ವಿತರಣೆ, ನಾಲೆ ನೀರಿನ ನಿರ್ವಹಣೆ ಸರಿ ಇಲ್ಲ ಎಂದು ಎಂಜಿನಿಯರುಗಳನ್ನು ರೈತರು ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರ ಸಮ್ಮುಖದಲ್ಲೇ  ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದ ಭದ್ರಾ ನಾಲಾ ನಂ- 3 ವಿಭಾಗದ ಇಂಜಿನಿಯರ್ ಕಛೇರಿಯಲ್ಲಿ ಬುಧವಾರ ನಡೆಯಿತು.

ಕಛೇರಿಯಲ್ಲಿ ಸಾಕಷ್ಟು ವಾದ ವಿವಾದ, ಅಸಹಾಯಕತೆ ಪ್ರದರ್ಶನದ ಜೊತೆಗೆ  ಕೈ ಕೈ ಮಿಲಾಯಿಸಿದ ಘಟನಾವಳಿ ನಂತರ ಅಚ್ಚುಕಟ್ಟಿನ ಕೊನೆಭಾಗಕ್ಕೆ ನೀರು ಏಕೆ ತಲುಪಿಲ್ಲ ಎಂದು ರೈತರು  ಸಮಸ್ಯೆಯನ್ನು ಭದ್ರಾ ಎಸ್ಇ  ಸುಜಾತಾ ಅವರ ಉಪಸ್ಥಿತಿಯಲ್ಲಿ ಚರ್ಚಿಸಿದರು.

ನೀರಿನ ಹರಿವಿನ ಪ್ರಮಾಣ ಸರಿ ಇರುವುದಿಲ್ಲ, ರೈತರು  ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ರೈತ ಮುಖಂಡರಾದ ಸಿರಿಗೆರೆ ರುದ್ರಪ್ಪ, ಜಿಗಳಿಯ ಬಿಳಸನೂರು ಚಂದ್ರಪ್ಪ ಮತ್ತಿತರರು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿನಿತ್ಯ ಪಡೆಯುವ ಮಾಹಿತಿಯಂತೆ ಬಸವಾಪಟ್ಟಣ ಬಳಿಯ ನಿಯಂತ್ರಣ 2ರ ತನಕ ನಿಗದಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಲೇಬೆನ್ನೂರು ಭಾಗದಲ್ಲಿವಿತರಣೆ ಸರಿಯಾಗಿಲ್ಲ ಎಂದು ಇಇ ಪಟೇಲ್, ಎಇಇ ಚಂದ್ರಕಾಂತ್ ಅವರ ಜೊತೆಗೆ ರೈತರ ನೆರವಿಗೆ ಬರದ ಮತ್ತು ಕಾಡಾ ಸಭೆಗೆ ಬಾರದ ಜನಪ್ರತಿನಿಧಿಗಳನ್ನ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ತರಾಟೆಗೆ ತೆಗೆದುಕೊಂಡರು.

ರೈತರ ಸಂಕಷ್ಟದ ಸಮಯದಲ್ಲಿ ಅವರಿಗೆ ನೆರವಾಗಿ, ಮೊಬೈಲ್ ಕರೆ ಸ್ವೀಕರಿಸಿ, ಕೈತುಂಬ ಸಂಬಳ, ಸರ್ಕಾರದಿಂದ ವಾಹನ ಪಡೆದಿದ್ದೀರಿ, ಸರಿಯಾಗಿ ಕೆಲಸ ಮಾಡಲು ಆಗದಿದ್ದಲ್ಲಿ ಬೇರಡೆಗೆ ವರ್ಗಾವಣೆ  ಮಾಡಿಸಿಕೊಂಡು ಹೋಗಿ ಅಥವಾ ನಿವೃತ್ತಿಪಡೆಯಿರಿ ಎಂದರು.

 ಈ ವೇಳೆ ಎಂಜಿನಿಯರುಗಳು ಸಿಬ್ಬಂದಿ ಕೊರತೆ, ನೀರಿನ ಕೊರತೆ, ಮೇಲ್ಭಾಗದ ಅಕ್ರಮ ಪಂಪ್ ಸೆಟ್ ಸಮಸ್ಯೆಗಳನ್ನು ಸಭೆಯಲ್ಲಿ ಹೇಳಿದರು. ಒಂದು ಹಂತದಲ್ಲಿ ನಿಯಂತ್ರಣ 2 ರ ಮೇಲ್ಭಾಗದ ಅಕ್ರಮ ಪಂಪ್ ಸೆಟ್ ಗಳ ಏಕೆ ತೆರವು ಮಾಡಿಲ್ಲ, ನ್ಯಾಯಾಲಯ ಆದೇಶ ಉಲ್ಲಂಘನೆ ಮಾಡಿದ್ದೀರಿ ಎಂದು ನ್ಯಾಯಾಲಯಕ್ಕೆ ಹೋಗಿರುವ ರೈತರು ಆರೋಪಿಸಿದರು.

ಅಕ್ರಮ ಪಂಪ್ ಸೆಟ್ ತೆರವಿನ ವಿಚಾರದಲ್ಲಿ ಡಿಸಿ ನೇತೃತ್ವದಲ್ಲಿ ಟಾಸ್ಕ್ಫೋರ್ಸ ರಚಿಸಿ ಕಾರ್ಯಾಚರಣೆ ನಡೆಸಬೇಕಿದೆ. ನಮ್ಮ ಇಲಾಖೆಯಿಂದ ಸಾಧ್ಯವಿಲ್ಲ, ಈಗಾಗಲೆ ಕಲ್ಲಿನಿಂದ ಹೊಡೆಸಿಕೊಂಡು ಬಂದಿದ್ದೇವೆ, ಪೊಲೀಸರ ಸಹಾಯ ಮಾಡುವುದಿಲ್ಲ ಎಂದು ಇಂಜಿನಿಯರ್ ಗಳು ಕೈ ಚೆಲ್ಲಿದರು. 

ಮತ್ತೆ ಆಕ್ರೋಶಗೊಂಡ  ರೈತರು ನೀವು ಅಕ್ರಮ ಪಂಪ್ ಹಾಕಿಕೊಂಡವರ ವಿರುದ್ಧ  ಏಕೆ ನ್ಯಾಯಾಲಯದಲ್ಲಿ  ಮೇಲಾಧಿಕಾರಿಗಳಿಗೆ ದೂರು ನೀಡಿಲ್ಲ ಎಂದು ಪ್ರಶ್ನಿಸಿದ ಘಟನೆಯೂ ನಡೆಯಿತು.

ಅಕ್ರಮ ಪಂಪ್ ಹಾಕಿಕೊಂಡವರು ಚೆನ್ನಾಗಿದ್ದಾರೆ, ಕೊನೆಭಾಗದ ರೈತ  ಸಂಕಷ್ಟದಲ್ಲಿದ್ದಾನೆ ಎಂದು ರೈತರು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಅಚ್ಚುಕಟ್ಟಿನ ಯಾವಭಾಗದ ಜಮೀನಿಗೆ ನೀರು ತಲುಪಿಲ್ಲ ಪಟ್ಟಿ ನೀಡಿ ಎಂದು ಭದ್ರಾ ಎಸ್ಇ ಹೇಳಿದಾಗ, ಒಣಗಿದ ಭತ್ತದ ಗದ್ದೆಗೆ ಬಂದು  ಸತ್ಯಾಸತ್ಯತೆ ಪರಿಶೀಲಿಸಿ ಎಂದು ರೈತರು ಪಟ್ಟು  ಹಿಡಿದರು.

ಆಗ ವಿಧಿ ಇಲ್ಲದೆ  ಅಧಿಕಾರಿಗಳ ತಂಡ ಕೊನೆಗೆ ನೀರಿಲ್ಲದೆ ಒಣಗಿರುವ ಕೊನೆಭಾಗದ ಕೆ.ಎನ್ ಹಳ್ಳಿ, ಹೊಳೆಸಿರಿಗೆರೆ, ಪಾಳ್ಯ  ಮತ್ತಿತರರ ಗ್ರಾಮಗಳ ಜಮೀನುಗಳನ್ನು ಖುದ್ದು ಪರಿಶೀಲಿಸಿದರು. ನೀರಿನ ರೊಟೇಷನ್ ಮುಗಿಯುವುದರೊಳಗಾಗಿ ಈ ಭಾಗದ ರೈತರಿಗೆ ನೀರು ತಲುಪಿಸುವಂತೆ ಕಾಡಾಧ್ಯಕ್ಷರು ಇಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ದೇವರ ಬೆಳಕೆರೆ ಪಿಕಪ್ ಜಲಾಶಯದ ಗೇಟ್ ಸಮಸ್ಯೆ ಪರಿಹರಿಸಲು ಮಾ. 7 ರಂದು ಕೆಇಆರ್ ಸಿ ತಂಡ ಭೇಟಿ ನೀಡಲಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ತೆಗೆದು ಕೊಳ್ಳುವುದಾಗಿ ಭದ್ರಾ ಎಸ್ ಇ ಸುಜಾತ ತಿಳಿಸಿದರು.

error: Content is protected !!