ಮಲೇಬೆನ್ನೂರು, ಫೆ.21- ಹರಳಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಬಸವಾಪಟ್ಟಣ ಉಪವಿಭಾಗದ 8ನೇ ಉಪಕಾಲುವೆಯಲ್ಲಿ ಹೂಳು ತುಂಬಿಕೊಂಡು ನೀರು ಮುಂದೆ ಹೋಗದೇ ಕೆಳಭಾಗದ ರೈತರಿಗೆ ತುಂಬಾ ತೊಂದರೆ ಆಗಿತ್ತು.
ಈ ವಿಷಯವನ್ನು ಇಂಜಿನಿಯರ್ ಗಮನಕ್ಕೆ ತಂದರೂ ಸ್ಪಂದನೆ ಸಿಗದ ಕಾರಣ ರೈತರು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರನ್ನು ಸಂಪರ್ಕಿಸಿ ಕಾಲುವೆಯಲ್ಲಿನ ಹೂಳನ್ನು ಜೆಸಿಬಿ ಮೂಲಕ ತೆಗೆಸಿಕೊಡುವಂತೆ ಕೇಳಿದ್ದಾರೆ.
ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಶ್ರೀನಿವಾಸ್ ಅವರು ಯುವ ಬ್ರಿಗೇಡ್ ಯುವ ಕರಿಗೆ ಹೇಳಿ ಜೆಸಿಬಿಯನ್ನು ಕಳು ಹಿಸಿ ಕಾಲುವೆ ಸ್ವಚ್ಛಗೊಳಿಸುವ ಕೆಲಸವನ್ನು ಸೋಮವಾರ ಆರಂಭಿಸಿದ್ದಾರೆ. ಗ್ರಾಮದ ಈ ಕಾಲುವೆ ನೀರು ಹಾಲಪ್ಪನವರ ಹೊಲದಿಂದ ಬನ್ನಿಕೋಡು ರಸ್ತೆಯವರೆಗಿನ ರೈತರಿಗೆ ತಲುಪಲಿದೆ ಎನ್ನಲಾಗಿದೆ.
ರೈತರಾದ ವಗ್ಗರ ಮಂಜಪ್ಪ, ಮುದ್ದೇರ ಕುಮಾರ್, ಕೊಂಡಿ ರಮೇಶ್, ಗ್ರಾ.ಪಂ. ಸದಸ್ಯ ಪಕ್ಕೀರಪ್ಪ, ವೀರೇಶ್, ತೋಟಿಗೇರ ರಾಜಪ್ಪ, ಲಕ್ಷ್ಮಣಸ್ವಾಮಿ, ಮಹಾಂತೇಶ್, ನಿಟ್ಟೂರು ಮಂಜು, ಪ್ರದೀಪ್, ಸಿದ್ದಪ್ಪ ಹಾಗೂ ಯುವ ಬ್ರಿಗೇಡ್ನ ಮಂಜು, ಬೀರೇಶ್, ಸಂತೋಷ್, ಮಾರುತಿ, ಪರಶುರಾಮ್ ಈ ವೇಳೆ ಹಾಜರಿದ್ದರು.
ಕುಣೆಬೆಳಕೆರೆ ಗ್ರಾಮದಲ್ಲೂ ಸಹ ನಂದಿಗಾವಿ ಶ್ರೀನಿವಾಸ್ ಅವರು ರೈತರ ಮನವಿ ಮೇರೆಗೆ ತಮ್ಮ ಸ್ವಂತ ಹಣದಲ್ಲಿ ಹೂಳು ತುಂಬಿಕೊಂಡಿದ್ದ ಕಾಲುವೆಯನ್ನು ಸ್ವಚ್ಛಗೊಳಿಸಿ ರೈತರಿಗೆ ನೆರವಾಗಿದ್ದಾರೆ.