ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ
ಹರಿಹರ, ಫೆ.12- ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಅವರು ಬರುವ ಮಾರ್ಚ್ 4 ರಂದು ದಾವಣಗೆರೆ ನಗರದಲ್ಲಿ ಪಕ್ಷದ ಕಾರ್ಯಕರ್ತರ ಬೃಹತ್ ಸಭೆಯನ್ನು ನಡೆಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ನಗರದ ಜಯಶ್ರೀ ಟಾಕೀಸ್ ಪಕ್ಕದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣಾ ಪೂರ್ವ ತಯಾರಿ ನಿಟ್ಟಿನಲ್ಲಿ ಮೊದಲ ಮಾ.4 ರಂದು ಸಭೆಯನ್ನು ದಾವಣಗೆರೆ ನಗರದಲ್ಲಿ ಆಯೋಜನೆ ಮಾಡಲಾಗುತ್ತದೆ. ಮಾ.5 ರಂದು ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.
ಆಮ್ ಆದ್ಮಿ ಪಕ್ಷ ದೆಹಲಿ ನಗರದಲ್ಲಿ ಉತ್ತಮ ಕೊಡುಗೆಯನ್ನು ನೀಡಿದ ಪರಿಣಾಮ ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೆ ಬಂದಿತು. ಶೇ.1 ರಷ್ಟು ಕಮಿಷನ್ ಪಡೆದ ಮಂತ್ರಿಯನ್ನು ಜೈಲಿಗೆ ಕಳಿಸಿದರು. ಆದರೆ, ರಾಜ್ಯದಲ್ಲಿ ಬಿಜೆಪಿ ಪಕ್ಷದವರು ಶೇ.40 ರಷ್ಟು ಕಮೀಷನ್ ಪಡೆದುಕೊಂ ಡರೂ ಅವರನ್ನು ಅಧಿಕಾರದಲ್ಲಿ ಆಡಳಿತವನ್ನು ಮಾಡುವುದಕ್ಕೆ ಬಿಟ್ಟಿದ್ದಾರೆ ಎಂದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರು ಪ್ರತಿ ತಿಂಗಳಲ್ಲಿ 8 ರಿಂದ 10 ಸಾವಿರ ದುಡಿಯುವ ಯೋಜನೆಯನ್ನು ರೂಪಿಸಲಾಗುತ್ತದೆ. ಯಾವುದೇ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚದ ಹಣವನ್ನು ಪಡೆಯದ ರೀತಿಯಲ್ಲಿ ವ್ಯವಸ್ಥೆ ತರಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಎಲ್.ರಾಘವೇಂದ್ರ, ರಾಜ್ಯ ಮುಖಂಡ ಗುರುಮೂರ್ತಿ, ವಿಶ್ವನಾಥ್, ಜಿಲ್ಲಾ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಚಂದ್ರಪ್ಪ, ಹರಿಹರ ಆಮ್ ಆದ್ಮಿ ಪಕ್ಷದ ಮುಖಂಡರಾದ ವೈ.ಎನ್. ಮಲ್ಲಿನಾಥ್, ಗಣೇಶ ದುರ್ಗದ್, ಬಸವರಾಜ್ ಹಲಸಬಾಳು, ಪ್ರಶಾಂತ್ ಮತ್ತಿತರರು ಹಾಜರಿದ್ದರು.