ಮಲೇಬೆನ್ನೂರು, ಜೂ.10- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಮಾಜಿ ಶಾಸಕ ಎಸ್.ರಾಮಪ್ಪ ಅವರನ್ನು ವಿಶ್ವಾಸಕ್ಕೆ ಪಡೆದು ಹರಿಹರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರಲು ಹೋರಾಟ ಮಾಡುತ್ತೇನೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ಅವರು ಶನಿವಾರ ಹರಳಹಳ್ಳಿ ಗ್ರಾಮದಲ್ಲಿ ಹರಿಹರ ತಾ. ಪಂ. ಮತ್ತು ಹರಳಹಳ್ಳಿ ಗ್ರಾ.ಪಂ.ನ 15ನೇ ಹಣಕಾಸು ಯೋಜನೆಯ ಅನುದಾನದಡಿ ನಿರ್ಮಿಸಿರುವ ವಿಶೇಷಚೇತನರ ಕ್ಷೇಮಾಭಿವೃದ್ಧಿ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ನಮ್ಮದೇ ಸರ್ಕಾರ ಇತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ನಿರೀಕ್ಷೆಗೂ ಮೀರಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇವು. ನಂತರ ಹೆಚ್.ಎಸ್.ಶಿವಶಂಕರ್ ಅವರು ಶಾಸಕರಾದಾಗ ಕಾಂಗ್ರೆಸ್ ಸರ್ಕಾರ ಇತ್ತು. ಎಸ್.ರಾಮಪ್ಪ ಅವರು ಶಾಸಕರಾದ 18 ತಿಂಗಳು ಸಮ್ಮಿಶ್ರ ಸರ್ಕಾರ ಇತ್ತು. ನಂತರ ಬಿಜೆಪಿ ಸರ್ಕಾರ ಬಂತು. ಆಗ ಅವರು ನಿರೀಕ್ಷೆ ಮಾಡಿದಷ್ಟು ಕೆಲಸಗಳು ಆಗಲಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗ ನಾನು ಗೆದ್ದಿದ್ದೇನೆ ಕಾಂಗ್ರೆಸ್ ಸರ್ಕಾರ ಬಂದಿದೆ. ಹರಿಹರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಏನೂ ಆಗಲ್ಲ ಎಂಬ ಭಾವನೆ ಜನರಲ್ಲಿದೆ. ಅಭಿವೃದ್ಧಿ ಕೆಲಸಗಳು ಆಗಲ್ಲ ಎಂಬ ಬಗ್ಗೆ ಚಿಂತೆ ಮಾಡ ಬೇಡಿ. ಸರ್ಕಾರದಲ್ಲಿರುವವರ ಮನವೊಲಿಸಿ ಮತ್ತು ಹರಿಹರ ಕ್ಷೇತ್ರದ ಕಾಂಗ್ರೆಸ್ ನಾಯಕರ ಜೊತೆಗೂಡಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಹರೀಶ್ ಹೇಳಿದರು.
ಅಧಿಕಾರಿಗಳು ಎಲ್ಲದಕ್ಕೂ ಕಾನೂನು ಹೇಳದೆ ಸಂದರ್ಭಕ್ಕೆ ಅನುಗುಣವಾಗಿ ಮಾನವೀಯ ನೆಲೆಗಟ್ಟಿನ ಮೇಲೆ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಹರೀಶ್ ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ನಾನು ಗೆದ್ದ ನಂತರ ಪಂಚಾಯಿತಿಗಳಿಗೆ ಬಲ ನೀಡುವಂತೆ ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿದ್ದೇನೆ.
ಪ್ರತಿ ಗ್ರಾ.ಪಂ.ಗಳಿಗೂ ಭೇಟಿ ನೀಡಿ, ಜನಪ್ರತಿನಿಧಿಗಳ ಹಾಗೂ ಜನರ ಸಮಸ್ಯೆ ಆಲಿಸಿ, ಪರಿಹಾರಕ್ಕೆ ಯತ್ನಿಸುತ್ತೇನೆಂದು ನವೀನ್ ಹೇಳಿದರು.
ಹರಳಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ದೇವಕಿ ಹನುಮಂತಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ನಾಗಮ್ಮ ರಾಮಾಂಜನೇಯ, ತಾ.ಪಂ. ಮಾಜಿ ಅಧ್ಯಕ್ಷರಾದ ಐರಣಿ ಅಣ್ಣಪ್ಪ, ಗುಳದಹಳ್ಳಿ ಮಹಾಂತೇಶ್, ಜಿ.ಪಂ. ಎಇಇ ಗಿರೀಶ್, ತಾ.ಪಂ. ಎಡಿ ಶ್ರೀಮತಿ ಪೂಜಾ, ಗ್ರಾ.ಪಂ. ಪಿಡಿಓ ಕೆ.ಬಿ.ಶಾಂತಪ್ಪ, ಎಸ್‌ಡಿಎ ಡಿ.ಡಿ.ರೇವಣಪ್ಪ ಸೇರಿದಂತೆ ಗ್ರಾ.ಪಂ. ಸರ್ವ ಸದಸ್ಯರು, ಗ್ರಾಮಸ್ಥರು ಈ ವೇಳೆ ಹಾಜರಿದ್ದರು.