ಮಲೇಬೆನ್ನೂರು,ಜೂ. 10- ಬಹುನಿರೀಕ್ಷಿತ ಭೈರನಪಾದ ಏತ ನೀರಾವರಿ ಯೋಜನೆ ಅನುಷ್ಠಾನ, ಹರಿಹರ ನಗರಸಭೆ ಹಾಗೂ ಮಲೇಬೆನ್ನೂರು ಪುರಸಭೆಗೆ ಹೆಚ್ಚಿನ ಅನುದಾನ ಸೇರಿದಂತೆ ಹರಿಹರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುವಂತೆ ಮಾಜಿ ಶಾಸಕ ಎಸ್.ರಾಮಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಭೇಟಿ ಮಾಡಿ ಒತ್ತಾಯಿಸಿದ್ದಾರೆ.
ಹರಿಹರ ತಾಲ್ಲೂಕಿನ ರೈತರ ಬದುಕಿಗೆ ಬೆಳಕಾಗುವಂತಹ ಭೈರನಪಾದ ಏತ ನೀರಾವರಿ ಯೋಜನೆ ಮುಂದಿನ ತಿಂಗಳು ಮ೦ಡಿಸುವ ಬಜೆಟ್ನಲ್ಲೇ ಘೋಷಿಸಿ, ಅನುಷ್ಠಾನಗೊಳಿಸ ಬೇಕು. ಹಿ೦ದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೈರನಪಾದ ಯೋಜನೆ ಜಾರಿಗಾಗಿ ಸಾಕಷ್ಟು ಹೋರಾಟ, ಪ್ರಯತ್ನ ನಡೆಸಿದ್ದವು. ಆದರೆ ಹಿಂದಿನ ಸರ್ಕಾರ ನಮ್ಮ ಮನವಿಗೆ ಸ್ಪಂದನೆ ನೀಡಲಿಲ್ಲ.
ಗೋವಿನಹಾಳ್ ಸಮೀಪ ತು೦ಗಭದ್ರಾ ನದಿಯಿಂದ ನೀರು ಲಿಫ್ಟ್ ಮಾಡಿ, ಭದ್ರಾ ಅಚ್ಚುಕಟ್ಟಿನ ಕಡೆಯ ಭಾಗದ ರೈತರಿಗೆ ನೀರು ತಲುಪಿಸುವ ಭೈರನಪಾದ ಯೋಜನೆ ಇದಾಗಿದೆ. 2013ರಲ್ಲೇ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದರೂ ಅದು ಕಾರ್ಯ ರೂಪಕ್ಕೆ ಬರಲಿಲ್ಲ. 2018-19ರಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಅದ್ಯಾವುದೂ ಕಾರ್ಯ ಸಾಧ್ಯವಾಗಿಲ್ಲ. ಸುಮಾರು 1632 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವಂತಹ ಯೋಜನೆ ಇದು ಎಂದು ರಾಮಪ್ಪ ಅವರು ಸಿಎಂ ಗಮನಕ್ಕೆ ತಂದರು.
ಯೋಜನೆಗೆ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟು, ಆದಷ್ಟು ಬೇಗನೆ ಕಾಮಗಾರಿ ಆರಂಭಿಸಬೇಕು. ಹರಿಹರ ತಾಲ್ಲೂಕನ್ನೇ ಹಾದುಹೋಗುವ ತುಂಗಭದ್ರಾ ನದಿಯಿಂದ ತಾಲ್ಲೂಕಿನ ಕೆರೆಗಳಿಗೆ ಮಳೆಗಾಲದಲ್ಲಿ ನೀರು ತು೦ಬಿಸುವ ಕೆಲಸ ಆಗಬೇಕು. ಕೊಮಾರನಹಳ್ಳಿ ಸೇರಿ, ಅನೇಕ ಕೆರೆಗಳಿಗೆ ನದಿ ನೀರು ತು೦ಬಿಸುವುದರಿಂದ ಅಂತರ್ಜಲ ವೃದ್ಧಿಯಾಗುವ ಜೊತೆಗೆ, ರೈತರಿಗೂ ಸಾಕಷ್ಟು ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.
ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ: ಮನವಿ ಪತ್ರ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನದಲ್ಲಿ ರಾಮಪ್ಪ ಇದೇ ಯೋಜನೆ ಬಗ್ಗೆ, ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಧ್ವನಿ ಎತ್ತುತ್ತಿದ್ದೆ. ಭೈರನಪಾದ ಯೋಜನೆ ಬಗ್ಗೆಯೂ ಅಧಿವೇಶನದಲ್ಲಿ ಮಾತನಾಡಿದ್ದೆಲ್ಲಾ ನನಗೆ ನೆನಪಿದೆ. ಭೈರನಪಾದ ಯೋಜನೆ ಸೇರಿ ನಿಮ್ಮ ಕ್ಷೇತ್ರದ ಎಲ್ಲಾ ಮನವಿಗಳ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳುತ್ತೇವೆಂಬುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಧಿವೇಶನದಲ್ಲಿ ಹಿಂದೆ ತಾವು ಭೈರನಪಾದ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಮಪ್ಪ ಕೃತಜ್ಞತೆ ಸಲ್ಲಿಸಿದರು.