ಹರಿಹರದಲ್ಲಿ ರಂಜಾನ್ ಆಚರಣೆ : ಸಾಮೂಹಿಕ ಪ್ರಾರ್ಥನೆ

ಹರಿಹರದಲ್ಲಿ ರಂಜಾನ್ ಆಚರಣೆ : ಸಾಮೂಹಿಕ ಪ್ರಾರ್ಥನೆ

ಹರಿಹರ, ಏ. 22 – ಮುಸ್ಲಿಂ ಸಮುದಾಯದ ಬಾಂಧವರು ರಂಜಾನ್ ಹಬ್ಬವನ್ನು ಶನಿವಾರ ತಾಲ್ಲೂಕಿನಾದ್ಯಂತ ಶ್ರದ್ದಾ – ಭಕ್ತಿಯಿಂದ ಆಚರಿಸಿದರು.

ಅಂಜುಮನ್ ಶಾಲೆ ಸಮೀಪದ ಈದ್ಗಾ ಮೈದಾನ ಹಾಗೂ ಜೈಭೀಮ ನಗರ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಜೈ ಭೀಮ ನಗರ ಸಮೀಪದ ಈದ್ಗಾ ಮೈದಾನದಲ್ಲಿ ಮಹಿಳೆಯರೂ ಸಾಮೂಹಿಕ ಪ್ರಾರ್ಥನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರಾರ್ಥನೆ ನಂತರ ಪ್ರವಚನ ನೀಡಿದ ಧಾರ್ಮಿಕ ಗುರುಗಳು, ಒಂದು ತಿಂಗಳು ಆಚರಿಸಿದ ಉಪವಾಸ ವ್ರತದ ಸಮಾಪ್ತಿಯನ್ನು ಘೋಷಿಸುತ್ತಾ, ಕೇವಲ ಉಪವಾಸ ಇದ್ದರೆ ಸಾಲದು, ಈ ಮಾಸದಲ್ಲಿ ಸ್ಥಿತಿವಂತರು ತಮ್ಮ ಆಸ್ತಿ, ಅಂತಸ್ತಿಗನುಸಾರವಾಗಿ ದಾನ, ಧರ್ಮ ಮಾಡಬೇಕಿದೆ ಎಂದರು.

ಈ ಉಪವಾಸಗಳ ಮೂಲಕ ಇನ್ನೊಬ್ಬರ ಹಸಿವೆ, ಬಾಯಾರಿಕೆಯನ್ನು ನಮ್ಮ ಅನುಭವಕ್ಕೆ ತರಬೇಕು. ದುರ್ಬಲರ ಬದುಕನ್ನು ಆಲೋಚನೆಗೆ ಹಚ್ಚಬೇಕು. ಇನ್ನೊಬ್ಬನ ಹಸಿವು, ದಾಹವನ್ನು ಸ್ವಯಂ ಅನುಭವಿಸಿಕೊಂಡು ಅವರಿಗಾಗಿ ಮಿಡಿಯುವ ಗುಣವನ್ನು ಮೈಗೂಡಿಸಿಕೊಳ್ಳುವುದು ದೇವನಿಗೆ ಇಷ್ಟ ಎಂಬ ಸೊಗಸಾದ ಮತ್ತು ಮಾನವೀಯತೆಯ ಜೀವನ ಪಾಠವನ್ನು ರಂಜಾನ್ ಪ್ರಸ್ತುತಪಡಿಸುತ್ತದೆ ಎಂದರು.

ಮಿತಾಹಾರ ಸೇವನೆ ಮತ್ತು ಸರಳತೆಯ ಪ್ರಜ್ಞೆಯನ್ನು ನಮ್ಮಲ್ಲಿ ಬೆೆಳೆಸಬೇಕು. ಇದು ಸಹಾನುಭೂತಿಯ ತಿಂಗಳಾಗಿದೆ. ನಿಮ್ಮ ದುರ್ಬಲ ಸಹೋದರ-ಸಹೋದರಿಯರ ಬಗ್ಗೆಯೂ ಕಾಳಜಿ ವಹಿಸಿರಿ ಎಂಬ ಸಂದೇಶ ಈ ಹಬ್ಬದಾಚರಣೆಯಲ್ಲಿದೆ ಎಂದರು.

ರಂಜಾನ್‍ಗೆ ಮತ್ತೊಂದು ಮುಖವಿದೆ. ಅದುವೆ ಅಧ್ಯಾತ್ಮದ್ದು. ಅದು ಹಸಿವನ್ನು ಅಧ್ಯಾತ್ಮದ ಜೊತೆಗೆ ಜೋಡಿಸುತ್ತದೆ. ಮನದ ಕೊಳೆಯನ್ನು ನೀಗಿಸುವ ಪವಿತ್ರ ತಿಂಗಳು. ಉಪವಾಸ ಅಲ್ಲಾಹನ ಆರಾಧನೆ, ಕುರ್‍ಆನ್ ಪಾರಾಯಣ, ಪ್ರಾರ್ಥನೆ, ಐದು ಜಾಗರಣೆಯಲ್ಲಿ ಕಳೆಯುವ ಮಾಸವಾಗಿದೆ ಎಂದು ತಿಳಿಸಿದರು.

ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಮನೆಗಳಲ್ಲಿ ಶ್ಯಾವಿಗೆಯಿಂದ ತಯಾರಿಸುವ ಶಿರಕುಂಬ ಸಿಹಿ ಸೇರಿದಂತೆ ವಿವಿಧ ವಿಶೇಷ ಅಡುಗೆ ಮಾಡಿ ಸವಿಯಲಾಯಿತು. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡುವ ದೃಶ್ಯ ಕಂಡು ಬಂತು.

ಈ ಎರಡೂ ಈದ್ಗಾ ಮೈದಾನಗಳಿಗೆ ಆಗಮಿಸಿದ್ದ ವಿಧಾನಸಭಾ ಕ್ಷೇತ್ರದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಬ್ಬದ ಶುಭಾಶಯ ಕೋರಿದರು.

error: Content is protected !!