ನಾಡು-ನುಡಿ ರಕ್ಷಣೆ, ಮಾತೃಭಾಷೆಗೆ ಪ್ರಾಮುಖ್ಯತೆ ಅಗತ್ಯ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಅಭಿಮತ

ದಾವಣಗೆರೆ, ಸೆ. 12- ಮಗುವಿನ ಸರ್ವಾಂಗೀಣ ಬೆಳವಣಿಗೆಗೆ, ನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಮಾತೃ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ   ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ಕನ್ನಡ ಭಾಷಾ ಬೋಧನೆ’ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೆ ಮಕ್ಕಳಿಗೆ ಶಿಕ್ಷಿಸಿ ಪಾಠ ಕಲಿಸುವಂತೆ ಪೋಷಕರೇ ಹೇಳುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಮಕ್ಕಳಿಗೆ ಬೈದು ಬುದ್ಧಿ ಹೇಳುವುದೂ ಶಿಕ್ಷಕರಿಗೆ ಕಷ್ಟವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರೂ, ಉಪನಿರ್ದೇಶಕ (ಅಭಿವೃದ್ಧಿ) ಹೆಚ್.ಕೆ. ಲಿಂಗರಾಜ್, ಶಿಕ್ಷಕರು ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಭಾಷಾ ಬೋಧನೆ ಕಾರ್ಯಾಗಾರ ಸಹಕಾರಿಯಾಗಿದೆ ಎಂದರು.

ಹಲವಾರು ವರ್ಷಗಳ ಹಿಂದೆ ಉತ್ತಮ ದರ್ಜೆಯ ಕಟ್ಟಡ, ಗ್ರಂಥಾಲಯ, ಪೀಠೋಪಕರಣಗಳ ಕೊರತೆ  ಇತ್ತು. ಆದರೆ ಶಿಕ್ಷಣ ಕ್ಷೇತ್ರ ಅದೆಲ್ಲವನ್ನೂ ಮೆಟ್ಟಿ ನಿಂತಿದೆ. ಉತ್ತಮ ದರ್ಜೆಯ ಕಟ್ಟಡಗಳಿವೆ, ಗ್ರಂಥಾಲಯಗಳು, ಪೀಠೋಪಕರಣಗಳಿವೆ. ಉತ್ತಮ ದರ್ಜೆಯ ಶಿಕ್ಷಕರೂ ಇದ್ದಾರೆ ಎಂದರು.

ಆದಾಗ್ಯೂ ಶಿಕ್ಷಕರಲ್ಲಿ ಅಧ್ಯಯನದ ಕೊರತೆ ಇದೆ. ಬದಲಾದ ಸನ್ನಿವೇಶಗಳಿಗೆ ಶಿಕ್ಷಕರು ತಮ್ಮ ಜ್ಞಾನ ವೃದ್ಧಿಸಿಕೊಳ್ಳುವ ಅಗತ್ಯತೆ ಇದೆ. ಇಂತಹ ಕಾರ್ಯಾಗಾರಗಳನ್ನು ಶಿಕ್ಷಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಯಾಗಾರಕ್ಕೆ ಶುಭ ಹಾರೈಸಿದರು.

ಕನ್ನಡ ವರ್ಣಮಾಲೆ-ಒಂದು ವೈಜ್ಞಾನಿಕ ವಿಶ್ಲೇಷಣೆ ಕುರಿತ ಪ್ರಥಮ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ, ಭಾರತದಲ್ಲಿ ಎರಡು ಕುಟುಂಗಳ ಭಾಷೆಗಳಿವೆ. ಉತ್ತರ ಭಾರತದ ಆರ್ಯನ್ ಭಾಷೆ ಹಾಗೂ ದಕ್ಷಿಣ ಭಾರತದ ದ್ರಾವಿಡ ಭಾಷೆ ಎಂದರು.

ಪ್ರಪಂಚದಲ್ಲಿ 6 ಸಾವಿರ ಭಾಷೆಗಳಿವೆ. ಅವುಗಳ ಪೈಕಿ ಭಾರತದಲ್ಲಿಯೇ 3 ಸಾವಿರ ಭಾಷೆಗಳಿವೆ. ಆದರೆ ಹೆಚ್ಚಿನ ಭಾಷೆಗಳಿಗೆ ಲಿಪಿ ಇಲ್ಲ.  ಹಲವು ವರ್ಷಗಳ ಪ್ರಯತ್ನದ ಫಲ ವಾಗಿ ಈ ಭಾಷೆಗಳು ಬಂದಿದ್ದಾಗಿ ಹೇಳಿದರು.

ಮಧ್ಯಾಹ್ನದ ಎರಡನೇ ಗೋಷ್ಠಿಯಲ್ಲಿ ಗದ್ಯ-ಪದ್ಯ ಬೋಧನೆ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕ ಡಾ.ದಾದಾಪೀರ್ ನವಿಲೇಹಾಳ್ ಹಾಗೂ ಮೂರನೇ ಗೋಷ್ಠಿಯಲ್ಲಿ ಮಾತೃಭಾಷಾ ಬೋಧನೆ ಮತ್ತು ಪದ ಪ್ರಯೋಗ ಕುರಿತು ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹೆಚ್.ಎಂ. ಬಸವರಾಜಪ್ಪ ಮಾತನಾಡಿದರು.

ಕಸಾಪ ನಿಕಟ ಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಗೌರವ ಕಾರ್ಯದರ್ಶಿಗಳಾದ ಎನ್.ಎಸ್. ರಾಜು, ಬಿ.ದಿಳ್ಯಪ್ಪ, ಜಿ.ಆರ್. ಷಣ್ಮುಖಪ್ಪ ಇತರರು ಉಪಸ್ಥಿತರಿದ್ದರು.

error: Content is protected !!