ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿಭಟನೆ
ದಾವಣಗೆರೆ, ಸೆ.12- ಸಾಮಾಜಿಕ ಹೋರಾ ಟಗಾರ ಕೆ.ಎಲ್.ಅಶೋಕ್ ಮತ್ತು ಅವರ ಕುಟುಂ ಬದ ಸದಸ್ಯರ ಮೇಲೆ ದುರುದ್ದೇಶ ಪೂರ್ವಕವಾಗಿ ಕಿರುಕುಳ ನೀಡಿದ ಕೊಪ್ಪ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಕಳೆದ ಸೆ.7ರಂದು ಸಾಮಾಜಿಕ ಕಾರ್ಯಕರ್ತ ಮತ್ತು ಚಿಂತಕರಾದ ಕೆ.ಎಲ್.ಅಶೋಕ್ ಮತ್ತು ಅವರ ಕುಟುಂಬದ ಸದಸ್ಯರನ್ನು ಟ್ರಾಫಿಕ್ ನಿಯಮ ಉಲ್ಲಂಘನೆಯ ನೆಪದಲ್ಲಿ ಕೊಪ್ಪ ಪೊಲೀಸರು ಅವಮಾನಿಸಿರುವುದು ಖಂಡನೀಯ. ನೋ ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿದ್ದರು ಎಂಬ ಒಂದೇ ಕಾರಣಕ್ಕೆ ಕೊಪ್ಪ ಪೊಲೀಸ್ ಠಾಣೆಯ ಪೇದೆ ರಮೇಶ್ ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ನಿಯಮ ಉಲ್ಲಂಘನೆಯಾಗಿದ್ದಕ್ಕೆ ಕೋರ್ಟ್ ಗೆ ದಂಡ ಕಟ್ಟುತ್ತೇನೆ ರಶೀದಿ ಕೊಡಿ ಎಂದು ಹೇಳಿದ್ದರೂ ಸಹ ಕೇಳದೆ ಗಾಡಿಯನ್ನು ಸೀಜ್ ಮಾಡುತ್ತೇವೆ ಎಂದು ಹೇಳಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯು ಸಹ ಸರಿಯಾಗಿ ವಿಚಾರಣೆ ಮಾಡದೆ ಸಬ್ ಇನ್‌ಸ್ಪೆಕ್ಟರ್ ರವಿ ಮತ್ತು ಪೇದೆ ರಮೇಶ್ ಇಬ್ಬರು ಉದ್ದೇಶ ಪೂರ್ವಕ ಎನ್ನುವಂತೆ ಅವಮಾನ ಮಾಡಿದ್ದಲ್ಲದೆ, ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿ, ನಿಂದಿಸಿ ಅವಮಾನ ಮಾಡಿದ್ದಾರೆ. ಈ ರೀತಿಯಾಗಿ ಅಧಿಕಾರ ದುರುಪಯೋಗ ಪಡಿಸಿ ಕೊಂಡು ಸಂವಿಧಾನದ ಆಶಯಗಳ ಪರವಾಗಿ ಮತ್ತು ಜನರ ಪರವಾಗಿ ಮಾತನಾಡುವವರನ್ನು ದಮನ ಮಾಡುವ ಷಡ್ಯಂತ್ರದ ಭಾಗವಾಗಿ ಅವಮಾನಿಸುವ ಕೆಲಸ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹೋರಾಟಗಾರರು ಈ ರೀತಿಯ ತೊಂದರೆ ಅನುಭವಿಸುವಂತಾದರೆ ಇನ್ನೂ ಸಾಮಾನ್ಯ ಜನರ ಪಾಡು ಏನೆಂಬುದು ಯೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಯನ್ನು ನಡೆಸಿ ಕೊಪ್ಪ ಠಾಣೆಯ ಪೇದೆ ರಮೇಶ್ ಹಾಗೂ ಆತನಿಗೆ ಜೊತೆ ನೀಡಿದ ಸಬ್ ಇನ್‌ಸ್ಪೆಕ್ಟರ್ ರವಿಯವರನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರಿಬಸಪ್ಪ, ಸತೀಶ್ ಅರವಿಂದ್ , ಆದಿಲ್ ಖಾನ್, ಅನ್ವರ್, ಅಬ್ದುಲ್ ರಶೀದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.