ನಿವೃತ್ತ ಪ್ರಾಚಾರ್ಯ ಡಾ.ಹೆಚ್.ವಿ. ವಾಮದೇವಪ್ಪ
ದಾವಣಗೆರೆ, ಸೆ. 12- ಓರ್ವ ಶಿಕ್ಷಕನಲ್ಲಿ ತಂದೆ-ತಾಯಿ ಇಬ್ಬರನ್ನೂ ಕಾಣಲು ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ಡಾ.ಹೆಚ್.ವಿ. ವಾಮದೇವಪ್ಪ ಹೇಳಿದರು.
ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಶನಿವಾರ ಹಮ್ಮಿ ಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಶಿಕ್ಷಕರಿಗೆ ಮಹಾತ್ಮ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕನ ಪಾತ್ರ ಮಹತ್ವವಾದದ್ದು, ಆದ್ದರಿಂದ ಶಿಕ್ಷಕರು ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬಿತ್ತಬೇಕು. ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ರೂಪಿಸಿದಲ್ಲಿ ಮಾತ್ರ ಶಿಕ್ಷಕರ ಜೀವನ ಸಾರ್ಥಕವಾಗುತ್ತದೆ ಎಂದರು.
`ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ’ ಇವುಗಳು ಬರೀ ಪದಗಳ ಸಾಲಲ್ಲ. ಜೀವನ ಸತ್ಯ, ಬದುಕಿನ ಹಾದಿ. ನಮ್ಮಲ್ಲಿ ಗುರುಗಳಿಗೆ ಪರಮ ಪವಿತ್ರ ಸ್ಥಾನವಿದೆ. ತಂದೆ, ತಾಯಿ ಮತ್ತು ಗುರುಗಳು ಪ್ರತಿಯೊ ಬ್ಬರ ಬದುಕನ್ನು ರೂಪಿಸುವ ಪ್ರಮುಖ ಶಕ್ತಿಗಳು ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಮಹಾತ್ಮ ಫುಲೆ, ಸಾವಿತ್ರಿ ಬಾಯಿ ಫುಲೆ ಮತ್ತು ಡಾ|| ರಾಧಾಕೃಷ್ಣನ್‍ರವರ ಜೀವನದ ಮರೆಯಲಾಗದ ಘಟನೆಗಳನ್ನು ಸ್ಮರಿ ಸಿದ ವಾಮದೇವಪ್ಪ ಅವರು, ಅಲ್ಲದೆ ಪ್ರಶಸ್ತಿ ಪಡೆದ 6 ಜನ ಶಿಕ್ಷಕರು ಪ್ರಶಸ್ತಿಗೆ ಯೋಗ್ಯರೆಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಸಿರಾಜ್ ಅಹಮ್ಮದ್, ಏಕಲವ್ಯನ ಕಾಲದಿಂದಲೂ ಶಿಕ್ಷಕರ ಪಾತ್ರ ಅಪೂರ್ವ ಎಂದರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವನಕೆರೆ ಬಸವಲಿಂ ಗಪ್ಪ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಬಡವರಿಗೆ ನಿಲುಕದಿರುವುದು ದುರಾ ದೃಷ್ಟ ಹಾಗೂ ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳಿಂದ ಬಡವರು ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.
ಶಿಕ್ಷಕರಾದ ಪ್ರಭಾಕರ್ ಎಂ.ಬಿ, ವೀರೇಶ್ ಪ್ರಸಾದ್, ಬಸವನಗೌಡ, ಶ್ರೀಮತಿ ವಿಶಾಲಾಕ್ಷಿ. ಹೆಚ್.ಆರ್, ಶ್ರೀಮತಿ ಅನುಸೂಯ ಮಂಜುನಾಥ್, ಶ್ರೀಮತಿ ಆಶಾ.ಬಿ. ಪಾಟೀಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯುಬಿ.ಡಿ.ಟಿ ಕಾಲೇಜಿನ ಪ್ರೊ. ಮಂಜುನಾಥ್ ಮಾತನಾಡಿದರು, ಕರುಣಾ ಟ್ರಸ್ಟಿನ ಆರ್.ಬೀ.ಪಾಟೀಲ್ ಸ್ವಾಗತಿಸಿದರು, ಸೋನು ವಂದಿಸಿದರು. ವೀಣಾಕುಮಾರ್ ನಿರೂಪಿಸಿದರು.