ಸ್ಮಾರ್ಟ್ಸಿಟಿ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಸ್ಸೆಸ್ ಸೂಚನೆ
ದಾವಣಗೆರೆ, ಸೆ. 12- ಮಹಾನಗರ ಪಾಲಿಕೆಯ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ತಮ್ಮ ಗೃಹ ಕಛೇರಿ ಶಿವಪಾರ್ವತಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿ, ಕೋವಿಡ್-19 ಲಾಕ್ ಡೌನ್ ನಿಂದ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಸಂಪೂರ್ಣವಾಗಿ ನಿಂತಿದ್ದು, ಇದೀಗ ಸಂಪೂರ್ಣವಾಗಿ ಲಾಕ್‌ಡೌನ್ ತೆರವು ಗೊಂಡಿದ್ದು, ಶೀಘ್ರವಾಗಿ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಗೆ ದಾವಣಗೆರೆ ದಕ್ಷಿಣ ಭಾಗವೇ ಹೆಚ್ಚಿನ ಪ್ರದೇಶವಿದ್ದು, ಈ ಯೋಜನೆಯ ಬಹುತೇಕ ಕಾಮಗಾರಿಗಳು ದಕ್ಷಿಣ ಭಾಗದಲ್ಲಿವೆ. ಕಾಮಗಾರಿಗಳು ಕಳಪೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ ಶಾಸಕರು ಕಾಮಗಾರಿಗಳ ಬದಲಾವಣೆ ಮಾಡುವ ವೇಳೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರುಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯ ಸಲಹಾ ಸಮಿತಿ ಸದಸ್ಯ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯರುಗಳಾದ ದೇವರಮನಿ ಶಿವಕುಮಾರ್, ರಹೀಂಸಾಬ್, ಚಮನ್ ಸಾಬ್, ಜಾಕೀರ್, ಉದಯ್ ಕುಮಾರ್, ಸೈಯದ್ ಚಾರ್ಲಿ, ಕಬೀರ್, ಶಫೀಕ್ ಪಂಡಿತ್, ಮಂಜುನಾಥ್ ಗಡಿಗುಡಾಳ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸ್ಮಾರ್ಟ್‍ಸಿಟಿ ಯೋಜನೆಯ ಗುರುಪಾದಯ್ಯ, ನಂಜಪ್ಪ, ಸಿದ್ದೇಶ್, ಸತೀಶ್,ಚಂದ್ರಶೇಖರ್, ಮಲ್ಲಿಕಾರ್ಜುನ್ ಮತ್ತಿತರರಿದ್ದರು.