ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸಿ

ಹೊನ್ನಾಳಿ-ನ್ಯಾಮತಿಯಲ್ಲಿನ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಡಿಸಿಎಂ ಕಾರಜೋಳ

ಹೊನ್ನಾಳಿ, ಸೆ.12-  ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.

ನ್ಯಾಮತಿಯಲ್ಲಿ ಶನಿವಾರ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಾಗೂ ವಿವಿಧ ಸರ್ಕಾರಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಸಗಿ ಶಾಲೆಯ ಸುಮಾರು 34 ಸಾವಿರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು.

ಇಂದಿನ ದಿನಗಳಲ್ಲಿ ಪೋಷಕರು, ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಲು ಮುಖ್ಯ ಕಾರಣ ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗಳು. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಸಾರ್ವಜನಿಕರು ಬೆಂಬಲಿಸಬೇಕು ಎಂದರು.

ಕೊರೊನಾ ಭಯದಲ್ಲೂ ಕೂಡ ನಮ್ಮ ಕರ್ನಾಟಕ ವಸತಿ ಶಿಕ್ಷಣ ಪಿಯುಸಿ ಮಕ್ಕಳು ಶೇ. 86 ರಷ್ಟು ಉತ್ತೀರ್ಣರಾಗಿದ್ದಾರೆ. ರಾಜ್ಯದಲ್ಲಿ ಪಿಯುಸಿ ಸರಾಸರಿ ಶೇ.61 ರಷ್ಟಿದ್ದರೆ, ವಸತಿ ಶಿಕ್ಷಣ ಇಲಾಖೆ ಶೇ. 86 ರಷ್ಟು ಇದ್ದು, ಸರಾಸರಿ ಶೇ. 25 ರಷ್ಟು ಹೆಚ್ಚಾಗಿದೆ. ಅದೇ ರೀತಿ ಎಸ್‍ಎಸ್‍ಎಲ್‍ಸಿ ಮಕ್ಕಳು ಶೇ. 95 ರಷ್ಡು ಮಕ್ಕಳು ಉತ್ತೀರ್ಣರಾಗಿದ್ದಾರೆ. ರಾಜ್ಯದ ಸರಾಸರಿ 79 ರಷ್ಟು ಇದ್ದರೆ, ವಸತಿ ಶಿಕ್ಷಣ ಇಲಾಖೆ ಶೇ. 91 ರಷ್ಟಿದೆ ಎಂದು ತಿಳಿಸಿದರು.

ಹೊನ್ನಾಳಿ-ನ್ಯಾಮತಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಅಭಿವೃದ್ಧಿ ಕೆಲಸಗಳಿಗೆ 80 ಕೋಟಿ ರೂ.ಹಣವನ್ನು ಕೊರೊನಾ ಸಂಕಷ್ಟದಲ್ಲಿಯೂ ತರಲಾಗಿದೆ. ಇದರಿಂದ ಶಾಸಕ ರೇಣುಕಾಚಾರ್ಯ ಅವರ ಸಾಮಾಜಿಕ ಕಳಕಳಿ ದೊಡ್ಡಮಟ್ಟದಲ್ಲಿರುವುದು ತಿಳಿದುಬರುತ್ತದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ ಜನಾಂಗದ ಕಲ್ಯಾಣಕ್ಕಾಗಿ ಹಣ: ಪರಿಶಿಷ್ಟ ಜಾತಿಯ ಮಕ್ಕಳಿಗೆ ತೊಂದರೆ ಆಗಬಾರದು ಎನ್ನುವ ಸಲುವಾಗಿ ಎರಡು ವಸತಿ ಶಾಲೆಗಳು ಸುಮಾರು ರೂ. 36 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿವೆ. ಮತ್ತು 5 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ. ಎಸ್.ಸಿ ಎಸ್.ಟಿ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣ ಮಾಡಲಾಗುತ್ತಿದ್ದು, ಒಟ್ಟು 80 ಕೋಟಿಯಲ್ಲಿ ಸುಮಾರು 50 ಕೋಟಿಯಷ್ಟು ಹಣವನ್ನು  ಪರಿಶಿಷ್ಟ ಜಾತಿಯ ಜನಾಂಗದ ಕಲ್ಯಾಣಕ್ಕಾಗಿ ಇವತ್ತು ಶಾಸಕರು ಹಣ ತಂದಿರುವುದು ಅತ್ಯಂತ ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ ಎಂದು ತಿಳಿಸಿದರು.

ಮಾದರಿಯಾಗಿ ಶಿಕ್ಷಣ ನೀತಿ ಅನುಷ್ಠಾನ: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರಲು ನೀತಿ ರೂಪಿಸಿದ್ದು, ಕಾರ್ಯರೂಪಕ್ಕೆ ತರುವ ದೊಡ್ಡ ಜವಾಬ್ದಾರಿ ನಮ್ಮ ರಾಜ್ಯದ ಮೇಲಿದೆ. ದೇಶದ ಎಲ್ಲ ರಾಜ್ಯದವರು ನಮ್ಮ ರಾಜ್ಯದ ಕಡೆ ನೋಡುತ್ತಿದ್ದಾರೆ. ಈ ಮೂಲಕ ಮಾದರಿಯಾಗಿ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಬೇಕಿದೆ. ಸಮಾಜದಲ್ಲಿ ಎಲ್ಲ ಕ್ಷೇತ್ರದಲ್ಲಿನ ವೃತ್ತಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕವಾಗಿದೆ. ರಾಜ್ಯದ ಪ್ರತಿಯೊಬ್ಬ ಯುವಕರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದೊಂದು ದೊಡ್ಡ ಪರ್ಯಾಯವಾಗಲಿದೆ ಎಂದರು.

ನ್ಯಾಮತಿ ಪದವಿ ಕಾಲೇಜಿಗೆ ಡಿಜಿಟಲ್ ಲರ್ನಿಂಗ್ ಮ್ಯಾನೇಜ್ಮೆಂಟ್ ಶಿಕ್ಷಣ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಜಿಟಲ್ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿಯೊಂದು ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಅವಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ, 69 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಅವಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಂಸದರು ನಾವು ಬದ್ಧರಾಗಿದ್ದೇವೆ. ವಸತಿ ಶಾಲೆ, ರಸ್ತೆಗಳು, ಹಾಸ್ಟೆಲ್‍ಗಳು, ಎಪಿಎಂಸಿ, ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಅನೇಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿದೆ ಎಂದರು.

ಎಪಿಎಂಸಿಗೆ ಪೂರಕವಾಗಿ ಅನೇಕ ಯೋಜನೆ ಗಳನ್ನು ಮಂಜೂರು ಮಾಡಲಾಗುವುದು. ಜೊತೆಗೆ ಹೊನ್ನಾಳಿ-ನ್ಯಾಮತಿ ರಸ್ತೆ ಮಧ್ಯದಲ್ಲಿ ದ್ವೀಪ ಅಳವಡಿಸಲು ಕಾರ್ಯಕ್ರಮದಲ್ಲಿ ಕಾರಜೋಳ ಅವರಿಗೆ ವಿನಂತಿ ಮಾಡಲಾಗಿದೆ ಎಂದ ಅವರು, ಉನ್ನತ ಶಿಕ್ಷಣ ಸಚಿವರು ಕೌಶಲ್ಯ ಅಭಿವೃದ್ಧಿ ನಿಗಮದಿಂದ ಯುವಕರಿಗೆ ಕೆಲಸ ನೀಡಲು ಅನೇಕ ಕೋರ್ಸ್ ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ,  ರೇಣುಕಾಚಾರ್ಯ ಅವರು ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಹೊನ್ನಾಳಿ ತಾಲೂಕನ್ನು ನಂಬರ್ ಒನ್ ಮಾಡಬೇಕು ಎನ್ನುವ ಅಸೆ ಇಟ್ಟುಕೊಂಡಿದ್ದಾರೆ. ಅದನ್ನು ಮಾಡಿ ತೋರಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು. 

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರಪ್ಪ, ಹೊನ್ನಾಳಿ ತಾ.ಪಂ ಅಧ್ಯಕ್ಷ ರಂಗಪ್ಪ, ನ್ಯಾಮತಿ ತಾ.ಪಂ ಅಧ್ಯಕ್ಷ ರವಿಕುಮಾರ್, ಹೊನ್ನಾಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುರೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶಪ್ಪ, ಸುರೇಂದ್ರನಾಯ್ಕ್, ಉಮಾ ರಮೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಜಿ.ಪಂ, ತಾ.ಪಂ ಹಾಗೂ ಎಪಿಎಂಸಿ ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

error: Content is protected !!