ದಾವಣಗೆರೆ, ಸೆ.13- ಸದಾಶಿವ ಆಯೋಗವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಆಯೋಗ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಎಂಟು ವರ್ಷಗಳು ಕಳೆದರೂ, ಸರ್ಕಾರಗಳು ಸದಾಶಿವ ಆಯೋಗದ ವರದಿಯ ಜಾರಿಗೆ ಮುಂದಾಗದಿರುವ ಬಗ್ಗೆ ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.
ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವಲ್ಲಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವಂತೆ ನಗರಕ್ಕೆ ನಿನ್ನೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ. ಕಾರಜೋಳ ಅವರನ್ನು ಸೋಮಲಾಪುರ ಒತ್ತಾಯಿಸಿದ್ದಾರೆ.
ಸದಾಶಿವ ಆಯೋಗದಲ್ಲಿ ಅಸ್ಪೃಶ್ಯ ಜನಾಂಗಗಳ ಜೊತೆಗೆ ಇತರೆ ಪರಿಶಿಷ್ಟ ಜಾತಿಯಲ್ಲಿ ಇರುವಂತಹ ಆಯಾ ಜನಾಂಗಗಳ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಬೇಕೆಂಬುದು ಇದರ ಸದುದ್ಧೇಶ. ಆದರೆ ಸದಾಶಿವ ಆಯೋಗದ ವರದಿ ಇಂದಿಗೂ ಕೂಡ ಸರ್ಕಾರದಲ್ಲಿ ಮುಚ್ಚಿಡಲಾಗಿದೆ. ಆದ್ದರಿಂದ ಸದಾಶಿವ ಆಯೋಗದ ನೈಜ ವರದಿಯನ್ನು ಸರ್ಕಾರ ಮಂಡಿಸಿದಾಗ ಮಾತ್ರ ಅದರ ನಿಜ ಸ್ಥಿತಿಗತಿ ತಿಳಿಯುತ್ತದೆ. ಆದರೆ ಎಲ್ಲಾ ಸರ್ಕಾರಗಳು ಪರಿಶಿಷ್ಟ ಜಾತಿಯ ಅಸ್ಪೃಶ್ಯ ಜನಾಂಗಕ್ಕೆ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡುತ್ತಿರುವುದು ವಿಷಾದನೀಯ. ಈ ಕೂಡಲೇ ಸದಾಶಿವ ಆಯೋಗದ ವರದಿ ಜಾರಿ ಮಾಡಿಸಿ ಪರಿಶಿಷ್ಟ ಜಾತಿಯ ಎಲ್ಲಾ ಜನಾಂಗಗ ಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸ ಲಾತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಲು ಸರ್ಕಾರದಿಂದ 3 ಕೋಟಿ ಹಣ ಬಂದರೂ ಕೂಡ ಇಲ್ಲಿನ ಸ್ಥಳೀಯ ರಾಜಕಾರಣಿಗಳ ನಿರ್ಲಕ್ಷ್ಯತನದಿಂದ ನಿರ್ಮಾಣವಾಗಿಲ್ಲ. ಈ ಬಗ್ಗೆ ಸ್ಥಳೀಯ ಮುಖಂಡರ ಮೇಲೆ ಒತ್ತಡ ತಂದು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಹಕರಿಸುವಂತೆ ಹನುಮಂತಪ್ಪ ಸೋಮಲಾಪುರ ಅವರು ಸಚಿವರನ್ನು ಕೇಳಿಕೊಂಡಿದ್ದಾರೆ.
ಸಚಿವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ, ಮಾಯಕೊಂಡ ಶಾಸಕ ಪ್ರೊ|| ಲಿಂಗಣ್ಣ, ನೀಲಗುಂದದ ಹುಚ್ಚಪ್ಪ, ಅಜ್ಜಯ್ಯ ಲಕ್ಕಪ್ಪ, ಎಸ್.ಟಿ. ನಿಗಮದ ಮ್ಯಾನೇಜರ್ ಯಮನೂರು ಗೌಡ್ರು, ನಾಗೇಂದ್ರ, ಉಮೇಶ್ ಕುಂದರಗಿ ಹಾಗು ಇತರರು ಉಪಸ್ಥಿತರಿದ್ದರು.