ದಾವಣಗೆರೆ, ಸೆ.8- ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೈಲರ್ ಕಲ್ಯಾಣ ಮಂಡಳಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಟೈಲರ್ಸ್ ಮತ್ತು ಸಹಾಯಕರ ಫೆಡರೇಶನ್ ನೇತೃತ್ವದಲ್ಲಿ ನಗರದಲ್ಲಿ ಮೊನ್ನೆ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರ ಭೇಟಿಯಾಗಿ ಮನವಿ ಸಲ್ಲಿಸುವ ಸಲುವಾಗಿ ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟನಾಕಾರರು ಜಮಾಯಿಸಿದ್ದರು. ಉಸ್ತುವಾರಿ ಮಂತ್ರಿಗಳು ಬಾರದೆ ಇದ್ದುದರಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಟೈಲರ್‌ಗಳ ಕಲ್ಯಾಣ ಮಂಡಳಿ ರಚಿಸಿ, ಜಾರಿಗೆ ತರುವ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ, ಕಟ್ಟಡ ಮತ್ತು ಇತರೆ ನಿರ್ಮಾಣ ಮಾಲೀಕರಿಂದ ಸೆಸ್ ಸಂಗ್ರಹ ಮಾಡುವ ಮೂಲಕ ಹಣ ಸಂಗ್ರಹ ಮಾಡುತ್ತಿದ್ದು, ಅದರ ಮಾದರಿಯಲ್ಲಿ ಟೈಲರ್‌ಗಳ ಕಲ್ಯಾಣ ಮಂಡಳಿಗೆ ಟೆಕ್ಸ್ ಟೈಲ್ ಮಿಲ್ಸ್, ಗಾರ್ಮೆಂಟ್ಸ್, ಬಟ್ಟೆ ಅಂಗಡಿಗಳು ಹಾಗೂ ಬಟ್ಟೆ ಹೊಲಿಗೆಗೆ ಪೂರಕವಾಗಿ ಉತ್ಪನ್ನ ಮಾಡುವ ಸರಕುದಾರ ಉತ್ಪಾದಕರಿಂದ ಶೇ.1 ರಷ್ಟು ಸೆಸ್ ಸಂಗ್ರಹ ಮಾಡುವ ಮೂಲಕ ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತಂದು ರಾಜ್ಯಾದ್ಯಂತ ಇರುವ ಟೈಲರ್ ಮತ್ತು ಟೈಲರ್‌ಗಳ ಕುಟುಂಬದವರಿಗೆ ನೆರವಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ರಾಜ್ಯ ಉಪಾಧ್ಯಕ್ಷ ಸಿ. ರಮೇಶ್ ಮುಖಂಡರುಗಳಾದ ಆನಂದ ರಾಜ್, ಸರೋಜ, ಮಂಜುಳಾ, ಪುಷ್ಪ, ಫರೀದಾಬಾನು, ಜ್ಯೋತಿಲಕ್ಷ್ಮಿ, ನಾಗರತ್ನಮ್ಮ, ನೀಲಾಂಬಿಕೆ, ದಯಾನಂದ, ಯಶೋಧಾ, ಅಶೋಕ, ಶ್ರೀನಿವಾಸ್, ಭಾಗ್ಯಮ್ಮ, ಗದಿಗೇಶ್ ಪಾಳ್ಯದ, ವಿದ್ಯಾ, ಪವಿತ್ರ ಸೇರಿದಂತೆ ಇತರರು ಭಾಗವಹಿಸಿದ್ದರು.