ಸಾಣೇಹಳ್ಳಿ, ಆ.3- ಶರಣರು ಮನದೆರೆದು ಆಡಿದ ಅಮೃತ ನುಡಿಗಳೇ ವಚನಗಳು. ಅವು ಕೇವಲ ಸಾಹಿತ್ಯ ರಚನೆಗಾಗಿ ಬರೆದವುಗಳಲ್ಲ. ಬದುಕಿನ ಅನುಭವವಾಗಿದ್ದು, ಅನುಭಾವಗಳ ರಸಪಾಕವಾಗಿತ್ತು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.
ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ ಯ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.
ಅಲ್ಲಮ ಹೇಳುವಂತೆ ವಚನಗಳು ಅಮೃತ ಸಾಗರ, ಮೇರು ಪರ್ವತ. ಶಿವಯೋಗಿ ಸಿದ್ಧರಾಮೇಶ್ವರರು ಶೃತಿ, ಸ್ಮೃತಿ, ಆಗಮ, ಪುರಾಣಗಳನ್ನು ಹೀಗಳೆಯುತ್ತಲೇ ಎಮ್ಮ ನುಡಿ ಮಹಲಿಂಗನ ಹೃದಯದಲ್ಲಿ ಗ್ರಂಥಿಯಾಗಲಿ ಎನ್ನುವರು. ಬಸವಣ್ಣನವರು ಹಾಲತೊರೆ, ಬೆಲ್ಲದ ಕೆಸರು, ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ ಎನ್ನುವ ಮೂಲಕ ವಚನಗಳ ಮಹತ್ವವನ್ನು ಮನಗಾಣಿಸಿದ್ದಾರೆ.
ಮನುಷ್ಯ ಜೀವಂತವಿರಲು ಅನ್ನ, ನೀರು ಇತ್ಯಾದಿಗಳಿಗಿಂತ ಮುಖ್ಯವಾಗಿ ಪ್ರಾಣವಾಯು ಬೇಕು. ಶರಣರ ವಚನಗಳು ಪ್ರಾಣವಾಯು ಇದ್ದಂತೆ. ಅವುಗಳ ಉಸಿರಾಟದಿಂದ ಮನುಷ್ಯ ಮೃತ್ಯುಂಜಯನಾಗಬಹುದು. ಅದಕ್ಕಾಗಿಯೇ `ಒಡಲೆಂಬ ಬಂಡಿಗೆ ಮೃಢಶರಣರ ನುಡಿಗಡಣವೇ ಕಡೆಗೀಲು’ ಎಂದಿದ್ದಾರೆ ದಾಸಿಮಯ್ಯನವರು. ದೇವರಿಗಿಂತಲೂ ಶ್ರೇಷ್ಠವಾದವು ಶರಣರ ವಚನಗಳು. ಅವು ಕನ್ನಡ ಸಾಹಿತ್ಯಕ್ಕೆ ತಿಲಕವಿಟ್ಟಂತಿವೆ. ಬಸವಾದಿ ಶಿವಶರಣರ ವಚನಗಳು ಶಿವ ಸಾಕ್ಷಾತ್ಕಾರಕ್ಕೆ ಬೇಕಾದ ಮಂತ್ರಗಳು ಎಂದರು.
ವಚನಗಳು ಎಲ್ಲ ವಿಚಾರಗಳಲ್ಲೂ ನಮ್ಮ ಅಜ್ಞಾನ ಕಳೆದು ಅರಿವಿನ ಬೆಳಕನ್ನು ನೀಡುವವು. ಆ ಬೆಳಕಿನತ್ತ ಮುಖ ಮಾಡಿದರೆ ಸಾಕು; ನಮ್ಮ ಬದುಕು ಸ್ಥಾವರವಾಗದೆ ಜಂಗಮವಾಗುವುದು. ಆದರೆ ಮತ್ತು ಜನರು ಜ್ಯೋತಿಷ್ಯ, ಪಂಚಾಂಗ, ಪೂಜೆ, ಆ ದೇವರು, ಈ ದೇವರು ಎಂದು ಮೌಢ್ಯದ ಕೆಸರಲ್ಲಿ ಸಿಕ್ಕು ಉಸಿರುಗಟ್ಟಿ ತಾವೇ ತಮ್ಮ ಸಾವನ್ನು ಬರಮಾಡಿಕೊಳ್ಳುತ್ತಿದ್ದಾರೆ. ವಚನಗಳು ಸಹಜ, ಸರಳ ಬದುಕಿಗೆ ಹಿಡಿದ ಕನ್ನಡಿಗಳು. ಆ ಕನ್ನಡಿಯ ಮೂಲಕ ನಮ್ಮ ಕುರೂಪ ಕಳೆದುಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳುವ ಸಂಕಲ್ಪ ಮಾಡಬೇಕು. ವಚನ ಸಾಹಿತ್ಯದ ಅಮೃತವನ್ನು ಯಾರು ಬೇಕಾದರೂ ಕುಡಿದು ಚಿರಂಜೀವಿಗಳಾಗಬಹುದು ಎಂದರು.
`ವಚನ ಸಾಹಿತ್ಯ ಕನ್ನಡದ ಉಸಿರು’ ವಿಷಯ ಕುರಿತಂತೆ ಬೀದರ್‌ನ ಗೃಹಿಣಿ ಮೇನಕಾ ನರೇಂದ್ರ ಪಾಟೀಲ್ ಮಾತನಾಡಿ ಕನ್ನಡ ಮತ್ತು ವಚನ ಸಾಹಿತ್ಯ ಎರಡೂ ರೋಮಾಂಚನಗೊಳ್ಳುವ ಶಬ್ದಗಳು. ಕನ್ನಡ ಬಿಟ್ಟು ವಚನ ಸಾಹಿತ್ಯವಿಲ್ಲ; ವಚನ ಸಾಹಿತ್ಯ ಬಿಟ್ಟು ಕನ್ನಡವಿಲ್ಲ. ವಚನ ಸಾಹಿತ್ಯ ಕೇವಲ ಕನ್ನಡಕ್ಕಷ್ಟೇ ಅಲ್ಲ; ವಿಶ್ವ ಸಾಹಿತ್ಯಕ್ಕೇ ಒಂದು ಕಿರೀಟವಿದ್ದಂತೆ. ಬಸವಾದಿ ಶರಣರು ಬಳಸಿದ ಕನ್ನಡದ ವಚನ ಸಾಹಿತ್ಯಕ್ಕೆ ಮುಕ್ತತೆಯಿತ್ತು, ಸರಳತೆಯೂ ಇತ್ತು. ಯಾರು ಬೇಕಾದರೂ ಕಲಿಯಬಹುದಾಗಿತ್ತು ಎಂದರು.
ಕನ್ನಡದ ವಚನ ಶ್ರೇಷ್ಠತೆಯನ್ನು ಅರಿತು ದೂರ ದೂರದ ರಾಜ್ಯ, ದೇಶದಿಂದ ಹಲವಾರು ಶರಣರು ಉದಾಹರಣೆಗೆ ಅಫಘಾನಿಸ್ತಾನದಿಂದ ಮರುಳಶಂಕರ ದೇವರು, ಕಾಶ್ಮೀರದಿಂದ ಮೋಳಿಗೆ ಮಾರಯ್ಯ ಮುಂತಾದವರು ಕಲ್ಯಾಣಕ್ಕೆ ಆಗಮಿಸಿ, ಇಲ್ಲಿಯೇ ನೆಲೆ ನಿಂತು ಕನ್ನಡ ಕಲಿತು ಕನ್ನಡದಲ್ಲಿಯೇ ವಚನ ಸಾಹಿತ್ಯ ರಚಿಸಿದ್ದಾರೆ. ಆ ಎಲ್ಲ ವಚನಗಳು ಕೇವಲ ರಚನೆಗಾಗಿ ರಚಿಸಿದವಲ್ಲ; ಅನುಭಾವಿಕ ನೆಲೆಯಿಂದ ಮೂಡಿಬಂದಿರುವಂತಹವು. ಬಸವಣ್ಣನವರ ಕಾಲದಲ್ಲಿ ಆಡಳಿತ ಭಾಷೆ ಮತ್ತು ಧರ್ಮದ ಭಾಷೆ ಎರಡೂ ಕನ್ನಡವೇ ಆಗಿತ್ತು. ವಚನಕಾರರು ಅಚ್ಚ ಕನ್ನಡದ ಬೇಸಾಯಗಾರರಾಗಿದ್ದರು ಎಂದು ಹೇಳಿದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ. ಜ್ಯೋತಿ, ಕೆ. ದಾಕ್ಷಾಯಣಿ ಮತ್ತು ಹೆಚ್.ಎಸ್. ನಾಗರಾಜ್ ಸುಶ್ರಾವ್ಯವಾಗಿ ವಚನ ಗೀತೆಗಳನ್ನು ಹಾಡಿದರು. ಅಧ್ಯಾಪಕಿ ಕೆ. ದಾಕ್ಷಾಯಣಿ ಸ್ವಾಗತಿಸಿದರು. ಕಲ್ಯಾಣ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವಾಟ್ಸಾಪ್ ಮೂಲಕ ಕೇಳಿದ ಹಲವು ಪ್ರಶ್ನೆಗಳಿಗೆ ಪಂಡಿತಾರಾಧ್ಯ ಶ್ರೀಗಳು ಉತ್ತರಿಸಿದರು. ದೇಶ-ವಿದೇಶದ ನೂರಾರು ಅಂತರ್ಜಾಲಿಗರು ಕಾರ್ಯಕ್ರಮ ವೀಕ್ಷಿಸಿದರು.