ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ಅಮರವಾಗುವಂತೆ ಮಾಡಿದ್ದಾರೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ಅಮರವಾಗುವಂತೆ ಮಾಡಿದ್ದಾರೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ - Janathavaniಸಾಣೇಹಳ್ಳಿ, ಆ.20- ಕರ್ಪೂರ ತಾನು ಸುಟ್ಟುಕೊಂಡು ಸುವಾಸನೆ ಬೀರುವಂತೆ ಹಳಕಟ್ಟಿಯವರು ಸಹ ಕರ್ಪೂರವಾಗಿ  ಸುಟ್ಟುಕೊಂಡು ವಚನಸಾಹಿತ್ಯ ಅಮರವಾಗುವಂತೆ ಮಾಡಿದ್ದಾರೆ. ಅಂಥವರನ್ನು ಕನ್ನಡ ನಾಡು, ಕನ್ನಡ ನುಡಿಯ ಜನರು ಮರೆತರೆ ಆತ್ಮವಂಚನೆ ಮಾಡಿಕೊಂಡಂತೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.

ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

 ನಮ್ಮಲ್ಲಿ ಇತಿಹಾಸ ಪ್ರಜ್ಞೆಗಿಂತಲೂ ಪುರಾಣ ಪ್ರಜ್ಞೆ ಜಾಸ್ತಿ. ಹಾಗಾಗಿ ಹಳಕಟ್ಟಿಯವರಂಥ ಇತಿಹಾಸ ಪುರುಷರಿಗಿಂತಲೂ ನಮ್ಮ ಜನರಿಗೆ ರಾಮ, ಕೃಷ್ಣ, ಗಣಪ, ಹನುಮ ಇನ್ನಾರೋ ಪ್ರಧಾನರಾಗಿ ಕಾಣುವರು. ಅವರಿಗಾಗಿ ಕೋಟಿ ಕೋಟಿ ಖರ್ಚು ಮಾಡಿ ಗುಡಿ ಕಟ್ಟಿಸುವರು. ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮತ್ತೆ ಧಾರ್ಮಿಕ ಶೋಷಣೆಗೆ ದಾರಿ ಮಾಡುವರು. ಇದು ನಿಜಕ್ಕೂ ಧಾರ್ಮಿಕ, ಸಾಮಾಜಿಕ ದುರಂತವೇ ಸರಿ ಎಂದರು. ಹಳಕಟ್ಟಿಯವರು ಸಂಪಾದಿಸಿರುವ `ವಚನ ಶಾಸ್ತ್ರಸಾರ ಸಂಪುಟ’, `ಶರಣರ ಚರಿತ್ರೆಗಳು’, ಶಿವಶರಣೆಯರ ಚರಿತ್ರೆ, ಅಮರಗಣಾಧೀಶ್ವರ ಚರಿತ್ರೆ, ಶಿವಾನುಭವ ಶಬ್ದಕೋಶ, ಹರಿಹರನ ರಗಳೆಗಳು ಅವರನ್ನು ನಿಜಕ್ಕೂ ಅಮರರನ್ನಾಗಿಸಿವೆ. ಅವುಗಳ ಅಧ್ಯಯನದಿಂದ ಇಂದು ನಾವು ಅಮರರಾಗಬೇಕಾಗಿದೆ. ತಮ್ಮ ಬದುಕಿನುದ್ದಕ್ಕೂ ವಚನ ಸಾಹಿತ್ಯ ಮತ್ತು ಕನ್ನಡವನ್ನು ಉಸಿರಾಗಿಸಿಕೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಕಾಣುವುದು ದುರ್ಲಭ ಎಂದು ಅಭಿಪ್ರಾಯ ಪಟ್ಟರು.

 ಬಸವಣ್ಣನವರ ವಚನಗಳನ್ನು 1920 ರಲ್ಲೇ ಇಂಗ್ಲಿಷ್ ಗೆ ಅನುವಾದ ಮಾಡಿದ್ದು,  ಅವರ ದೂರದೃಷ್ಟಿಯ ಧ್ಯೋತಕ ಎನ್ನಿಸುವುದು. ಹೀಗೆ ಬಸವಾದಿ ಶಿವಶರಣರ ವಚನಗಳನ್ನು ಸಂಗ್ರಹಿಸುವ, ಅಲ್ಲಿನ ವಿಚಾರಗಳನ್ನು ದಾಖಲಿಸುವ, ಮುದ್ರಣ ಮಾಡುವ ಕಾಯಕವೇ ಅವರಿಗೆ ನಿಜವಾದ ಲಿಂಗಪೂಜೆ ಆಯಿತು. ಹಗಲಿರುಳೆನ್ನದೆ ವಚನಗಳ ಸಂಗ್ರಹ ಮಾಡುವುದು, ಅಲ್ಲಿಯ ವೈಚಾರಿಕ, ಧಾರ್ಮಿಕ ಬೆಳಕನ್ನು ಅನಾವರಣಗೊಳಿಸಿ ಸಾರ್ವಜನಿಕರಿಗೆ ತಲುಪಿಸುವುದೇ ಅವರ ನಿತ್ಯ ಜಪವಾಯಿತು.

ಆದಾಯ ತರುವ ಪ್ರಸಿದ್ಧ ವಕೀಲರಾಗಿ, ನಗರಸಭೆ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿವಿಧ ಸಂಘ ಸಂಸ್ಥೆಗಳ ಸಂಸ್ಥಾಪಕ ಸದಸ್ಯರಾಗಿದ್ದ ವ್ಯಕ್ತಿಗೆ ತೊಡಲು ಒಂದು ಒಳ್ಳೆಯ ಅಂಗಿ ಇರಲಿಲ್ಲ. ದಾವಣಗೆರೆಯ ತರಳಬಾಳು ಹುಣ್ಣಿಮೆಯ ಕಾರ್ಯಕ್ರಮಕ್ಕೆ ಬಂದಿದ್ದ ಹಳಕಟ್ಟಿಯವರ ಆರ್ಥಿಕ ದುಸ್ಥಿತಿಯನ್ನು ಅರಿತ ಗುರುಗಳು  ಮಠದಲ್ಲಿದ್ದ ಒಂದು ಬಂಗಾರದ ಪದಕವನ್ನು ತರಿಸಿಕೊಂಡು ಹಳಕಟ್ಟಿಯವರನ್ನು ಸನ್ಮಾನಿಸಿ ಆ ಪದಕವನ್ನು ಅವರ ಕೊರಳಿಗೆ ಹಾಕಿದರಂತೆ. `ಮಠ ಕೊಟ್ಟದ್ದು ಎಂದು ಈ ಬಂಗಾರದ ಪದಕವನ್ನು ಹಾಗೇ ಇಟ್ಟುಕೊಳ್ಳಬೇಡಿ. ಇದನ್ನು ಮಾರಿ ನಿಮ್ಮ ಸಾಲ ತೀರಿಸಿ ಋಣ ಮುಕ್ತರಾಗಿ. ಶರಣ ಸಾಹಿತ್ಯ ಸೇವಕರು, ಸಾಧಕರು ಸಾಲಗಾರರಾಗಿ ಸಾಯಬಾರದು’ ಎಂದು ಆಶೀರ್ವದಿಸಿದ್ದರಂತೆ. 

ಸಿರಿಗೆರೆ ಮಠವನ್ನು `ದುಗ್ಗಾಣಿ ಮಠ’ ಎಂದೇ ಅಪಹಾಸ್ಯ ಮಾಡುತ್ತಿದ್ದರು. ಆದರೆ ನಮ್ಮ ಗುರುಗಳು ಹಗಲು ರಾತ್ರಿ ಎನ್ನದೆ ಶ್ರಮಿಸಿ ಮಠಕ್ಕೆ ಒಂದು ಗೌರವ ಬರುವಂತೆ ಮಾಡಿದರು. ಅವರು ತಮ್ಮ ಅಲ್ಪ ಆದಾಯದಲ್ಲೇ ಅನೇಕರನ್ನು ಓದಿಸಿದರು. ಸಾಹಿತ್ಯ ಕೃತಿಗಳು ಹೊರತರಲು ಸಾಹಿತಿಗಳಿಗೆ ನೆರವು ನೀಡಿದರು. ಆದರೆ ಅಂಥ ಸಂಗತಿಗಳನ್ನು ಅವರೆಲ್ಲೂ ದಾಖಲಿಸುವ ಕಾರ್ಯ ಮಾಡಿಲ್ಲ. ಎಲೆಮರೆಯ ಕಾಯಂತಿದ್ದು ಆರ್ಥಿಕ ನೆರವು ನೀಡಿ ಅವರ ಬದುಕಿಗೆ ಚೈತನ್ಯ ತುಂಬಿದ ಪೂಜ್ಯರು ಸಹ ವಚನ ಸಾಹಿತ್ಯ ಪ್ರಚಾರ, ಪ್ರಸಾರಕ್ಕಾಗಿ ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಟ ಮಾಡಿದ್ದು ಅವಿಸ್ಮರಣೀಯ. ಈ ಎರಡೂ ಚೇತನಗಳ ಬದುಕು ನಮ್ಮೆಲ್ಲರದಾಗಲಿ ಎಂದು ಸಾಣೇಹಳ್ಳಿ ಶ್ರೀಗಳು ಸ್ವತಃ ಭಾವುಕರಾದರು. 

ವಚನಶಾಸ್ತ್ರ ಪಿತಾಮಹ ಫ.ಗು. ಹಳಕಟ್ಟಿ ಕುರಿತಂತೆ ಖ್ಯಾತ ವಿಮರ್ಶಕಿ ಬೆಂಗಳೂರಿನ ಡಾ. ಎಂ.ಎಸ್. ಆಶಾದೇವಿ ಮಾತನಾಡಿ, ಯಾರು ತ್ರಿಕಾಲಗಳನ್ನು ಗ್ರಹಿಸುವರೋ ಅವರು ಮಹಾಕವಿಗಳಾಗುವರು ಎಂದು ಕುವೆಂಪು ಹೇಳಿದ್ದಾರೆ. ಅದರಂತೆ ಹಳಕಟ್ಟಿಯವರೂ ಮಹಾಕವಿಗಳು. ಅವರು 1926 ರಲ್ಲಿ `ಶ್ರೀ ಬಸವೇಶ್ವರರ ವಚನಗಳು’ ಎನ್ನುವ ಸಂಪಾದಿತ ಕೃತಿಯನ್ನು ಮೊದಲಬಾರಿಗೆ ಪ್ರಕಟಿಸಿದರು. ಅದೇ ವರ್ಷ ಒಂದು ಬಿ.ಎಂ. ಶ್ರೀಯವರ `ಇಂಗ್ಲಿಷ್ ಗೀತೆಗಳು’ ಎನ್ನುವ ಕೃತಿಯನ್ನು ಪ್ರಕಟಿಸಿದರು. ಒಂದು ಅನರ್ಘ್ಯ ಶರಣ ಪರಂಪರೆಯನ್ನು ಹೇಳಿದರೆ ಇನ್ನೊಂದು ಆಧುನಿಕ, ಸಮಕಾಲೀನ ಕೃತಿ. ಈ ಎರಡೂ ಒಟ್ಟಿಗೆ ಘಟಿಸಿದ್ದು ಅದ್ಭುತವೇ ಸರಿ. ಶರಣ ಚಳುವಳಿ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುವಂಥ ಅನರ್ಘ್ಯ ಸಂಪತ್ತು. ಇಂಥ ಸಂಪತ್ತನ್ನು ಒಂದು ಕಡೆ ಸಂಪಾದಿಸಿದ ಹಳಕಟ್ಟಿಯವರ ಬಗೆಗೆ ಓದಿದಾಗ ವಿಶಿಷ್ಟವಾದ, ರೋಮಾಂಚನಗೊಳ್ಳುವ ಅನುಭವದ ಜೊತೆಗೆ ಅವರ ಪರಿಶ್ರಮದ ಬಗ್ಗೆ ದಿಗ್ಭ್ರಮೆಯೂ ಆಗುತ್ತದೆ ಎಂದರಲ್ಲದೆ, ಹಳಕಟ್ಟಿಯವರ ಸಾಧನೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಕಡೂರು ತಾಲ್ಲೂಕು ಯಳ್ಳಂಬಳಸೆಯ ವೈ.ವಿ. ದಿವ್ಯಾ ಸುದೀಪ್ ಸ್ವಾಗತಿಸಿದರು. ದಾವಣಗೆರೆಯ ಅಭಿಯಂತರ ಜಿ.ಎಂ. ವಿರೂಪಾಕ್ಷಪ್ಪ, ಶ್ರೀಮತಿ ನಿರ್ಮಲಾ ದಂಪತಿಗಳು ಕಾರ್ಯಕ್ರಮದ ದಾಸೋಹಿಗಳಾಗಿದ್ದರು. 

error: Content is protected !!