ಸಾಣೇಹಳ್ಳಿ, ಆ.7- ಬಸವಣ್ಣನವರ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಂಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ’ ಎನ್ನುವ ಸಪ್ತಸೂತ್ರಗಳೇ ವಚನ ಸಂವಿಧಾನವಾಗಿದೆ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.
ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಬಸವಣ್ಣನವರು ಇವನಾರವ, ಇವನಾರವ ಎನ್ನದೆ ಎಲ್ಲರನ್ನೂ ತಮ್ಮವರೆಂದು ಅಪ್ಪಿಕೊಳ್ಳುವ ಸಂವಿಧಾನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಂತರ ಲಿಖಿತ ರೂಪದಲ್ಲಿ ಜಾರಿಯಲ್ಲಿ ತಂದರು. ಇದಕ್ಕೆ ಪೂರಕವಾದ ಅಂಶಗಳನ್ನು ವಚನಗಳಲ್ಲಿ ಹೇರಳವಾಗಿ ಕಾಣಬಹುದು. ನಮ್ಮ ದೇಶಕ್ಕೆ ವಿಶಿಷ್ಠವಾದ ಸಂವಿಧಾನ ನೀಡಿದ ಕೀರ್ತಿ ಡಾ. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ್ ಅವರಿಗೆ ಬಸವಾದಿ ಶಿವಶರಣರ ವಿಚಾರಗಳು ತಿಳಿದಿದ್ದರೆ ಅವರು ಲಿಂಗಾಯತ ಧರ್ಮಕ್ಕೇ ಸೇರುತ್ತಿದ್ದರು ಮತ್ತು ಸಂವಿಧಾನದಲ್ಲಿ ವಚನಗಳ ಆಶಯಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ನಾವು ಹಲವು ಸಲ ಹೇಳಿದ್ದುಂಟು. ದ್ವಾರಕನಾಥ್ ಅವರ ಮಾತಿನಲ್ಲಿ ಅಂಬೇಡ್ಕರ್ ಅವರು ವಚನ ಸಂವಿಧಾನದ ಬಗ್ಗೆ ಅಂಬೇಡ್ಕರ್ ಅವರಿಗೆ ಅರಿವಿದ್ದಂತೆ ತೋರುತ್ತದೆ ಎಂದು ಅವರ ಮಾತುಗಳನ್ನೇ ದಾಖಲಿಸಿದ್ದನ್ನು ಕೇಳಿ ತುಂಬಾ ಸಂತೋಷವಾಗಿದೆ ಎಂದರು.
ವಚನ ಸಂವಿಧಾನದ ಮೂಲ ಆಶಯ ಕಲ್ಯಾಣ ರಾಜ್ಯದ ನಿರ್ಮಾಣಕ್ಕೆ ಬೇಕಾದ ತತ್ವ ಸಿದ್ಧಾಂತಗಳನ್ನು ವ್ಯಕ್ತಿಗತ ಬದುಕಿನಲ್ಲಿ ಜಾರಿಯಲ್ಲಿ ತರುವುದಾಗಿತ್ತು. ಅಲ್ಲಿ ಒತ್ತು ಕೊಟ್ಟದ್ದು ನಡೆ, ನುಡಿ ಸಿದ್ಧಾಂತಕ್ಕೆ. ನಡೆದಂತೆ ನುಡಿದರೆ, ನುಡಿದಂತೆ ನಡೆದರೆ ಕುಲ, ಹೊಲೆ, ಸೂತಕ ಇತ್ಯಾದಿ ಅನಿಷ್ಠಗಳು ತಮ್ಮಷ್ಟಕ್ಕೆ ತಾವೇ ನಾಶವಾಗುವವು. ಪ್ರಜಾಪ್ರತಿನಿಧಿ ಆದವನಿಗೆ ಪ್ರಜೆಗಳೇ ಪ್ರಭುಗಳು. ಅವರ ಸುಖವೇ ತನ್ನ ಸುಖ. ಅವರ ದುಃಖವೇ ತನ್ನ ದುಃಖ ಎನ್ನುವ ಅರಿವಿರಬೇಕು. ಪ್ರಜಾಪ್ರಭುಗಳ ಮನಸ್ಸು ನೊಂದಡೆ ಆನು ಬೆಂದೆನಯ್ಯಾ ಎನ್ನುವ ಬಸವಣ್ಣನ ಮಾತು ಚಿಂತನಾರ್ಹ. ಇವತ್ತಿನ ರಾಜಕಾರಣಿಗಳು ಪ್ರಜಾಪ್ರಧಿನಿಧಿಯಾಗುವ ಮುನ್ನ `ನಾನು ನಿಮ್ಮ ಸೇವಕ’ ಎಂದು ವಿನಯವಂತರಾಗಿ, ವಿವೇಕದ ಮಾತುಗಳನ್ನಾಡುತ್ತ ಜನಪರ ಕಾಳಜಿಯನ್ನು ತೋರುವರು. ಒಮ್ಮೆ ಮತದಾರ ಪ್ರಭುವಿನಿಂದ ಆಯ್ಕೆ ಆಗುತ್ತಲೇ ವಿನಯ, ವಿವೇಕ, ಜನಪರ ಕಾಳಜಿ ಎಲ್ಲವುಗಳನ್ನು ಗಾಳಿಗೆ ತೂರುವರು ಎಂದರು.
ನಮ್ಮ ದೃಷ್ಟಿಯಲ್ಲಿ ಭಾರತ ಸಂವಿಧಾನಕ್ಕೆ ಜೀವಸೆಲೆ ವಚನ ಸಂವಿಧಾನ. ವಚನ ಸಂವಿಧಾನದಲ್ಲಿ ನೇತಾರ ನ್ಯಾಯನಿಷ್ಠುರಿ ಮತ್ತು ದಾಕ್ಷಿಣ್ಯಪರನಾಗಿರಬೇಕು. ತನ್ನ ಕ್ಷೇತ್ರದ ಮತದಾರರು ಬಂದರೆ ಅವರು ತನಗೆ ಮತ ನೀಡದಿದ್ದರೂ ಪ್ರೀತಿಯಿಂದ ಸ್ವಾಗತಿಸಿ ಅವರ ಅಹವಾಲು ಕೇಳುವ, ಸಾಧ್ಯವಾದರೆ ಸಹಾಯ ಮಾಡುವ ಹೃದಯವಂತರಾಗಬೇಕು. ವಚನ ಸಂವಿಧಾನದ ಈ ಆಶಯವನ್ನು ಅರಿತು ಆಚರಣೆಯಲ್ಲಿ ತಂದರೆ ಖಂಡಿತ ಕಲ್ಯಾಣ ರಾಜ್ಯ ನೆಲೆಗೊಳ್ಳುವುದರಲ್ಲಿ ಅನುಮಾನವಿಲ್ಲ. `ಅನುಭವಮಂಟಪ’ ಮೊದಲ ಪಾರ್ಲಿಮೆಂಟ್. ಅಲ್ಲಮಪ್ರಭುದೇವರು ಅದರ ಮೊದಲ ಅಧ್ಯಕ್ಷರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಇದ್ದ `ಲಿಂಗಾಯತ ಧರ್ಮದ’ ಕಮಿಟಿಯಲ್ಲಿ ನಾನೂ ಸಹ ಸದಸ್ಯನಾಗಿದ್ದುದರಿಂದ ನನಗೆ ಸಂವಿಧಾನ ಮತ್ತು ವಚನಗಳನ್ನು ತುಲನೆಮಾಡಿ ಓದಲು ಹೆಚ್ಚು ಅವಕಾಶವಾಯಿತು. ಸಂಸತ್ತು ಇಂದು ಸುಪ್ರೀಮ್ ಆಗಿರುವಂತೆ ಬಸವಾದಿ ಶರಣರಿಗೆ ಅನುಭವ ಮಂಟಪ ಅಥವ ಕಲ್ಯಾಣ ರಾಜ್ಯವೇ ಸುಪ್ರೀಮ್ ಆಗಿತ್ತು. ಇವತ್ತಿನ ಸೋಷಿಯಲ್ ವೆಲ್ಫೇರ್ ಸ್ಟೇಟ್ ಪರಿಕಲ್ಪನೆ ಕಲ್ಯಾಣ ರಾಜ್ಯ ಅಂತಲೇ ಅರ್ಥ. ಇಂದಿನ ಸಂಸತ್ತಿನ ಪರಿಕಲ್ಪನೆ ಅಂದೇ ಅನುಭವ ಮಂಟಪದ ಮೂಲಕ ಆಗಿತ್ತು. ಇಂದಿನ `ಮೀಸಲಾತಿ’ಯನ್ನು ಅಂಬೇಡ್ಕರ್ `ಪ್ರತಿನಿಧಿತ್ವ’ ಎಂದರು. ಇಂದು ಕೂಡ ಅತಿ ಚಿಕ್ಕ ಸಮುದಾಯವಾದ `ಹೆಳವ ಸಮುದಾಯ’ ಸಂಸತ್ತಿಗಾಗಲಿ, ವಿಧಾನ ಸಭೆಗಳಿಗಾಗಲಿ ಹೋಗಲು ಸಾಧ್ಯವಾಗಿಲ್ಲ. ಆದರೆ 12ನೆಯ ಶತಮಾನದಲ್ಲಿ ಇಂಥ ಸಮುದಾಯಕ್ಕೂ ಕೂಡ ಬಸವಣ್ಣನ ಪಾರ್ಲಿಮೆಂಟ್ ಅಂದರೆ ಅನುಭವ ಮಂಟಪದಲ್ಲಿ ಪ್ರಾತಿನಿಧ್ಯವಿತ್ತು.
ಡಾ. ಸಿ.ಎಸ್. ದ್ವಾರಕನಾಥ್
ಓದುತ್ತಿರುವಾಗ ಸಾವಿರಾರು ವಚನಗಳು ಕಣ್ಮುಂದೆ ಬರುತ್ತವೆ. ವಚನ, ಸಂವಿಧಾನ ಎರಡನ್ನೂ ಒಟ್ಟೊಟ್ಟಿಗೆ ಅಧ್ಯಯನ ಮಾಡಬಹುದು. ಸಂವಿಧಾನಕ್ಕೆ ಪೂರಕವಾಗಿ ವಚನಗಳು, ವಚನಗಳಿಗೆ ಪೂರಕವಾಗಿ ಸಂವಿಧಾನವೂ ಇದೆ. ಈ ವಿಚಾರದಲ್ಲಿ ದೇಶದ ಯಾವುದೇ ಭಾಷೆಗೆ, ಯಾವುದೇ ರಾಜ್ಯಕ್ಕೆ ಇಂಥ ಸ್ಥಾನಮಾನಗಳಿಲ್ಲ.
ನಮ್ಮ ನೇತಾರರು ಭಾರತ ಸಂವಿಧಾನದ ಜೊತೆ ವಚನ ಸಂವಿಧಾನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕಿದೆ. ನೇತಾರರು ಮಾತ್ರವಲ್ಲ. ಮತದಾರ ಪ್ರಭು ಸಹ ವಚನ ಸಂವಿಧಾನದತ್ತ ಮುಖ ಮಾಡಬೇಕು. ಪ್ರಜಾಪ್ರಭು ಮತ್ತು ಪ್ರಜಾಸೇವಕ ಇಬ್ಬರೂ ತಮ್ಮ ಬದುಕಿನ ಕಲಂಕಗಳನ್ನು ಕಳೆದುಕೊಂಡಾಗ ಮಾತ್ರ ಭಾರತ ಸಂವಿಧಾನಕ್ಕೂ ಗೌರವ ಬರುತ್ತದೆ, ವಚನ ಸಂವಿಧಾನಕ್ಕೂ ಗೌರವ ಬರುತ್ತದೆ ಎಂದರು.
ವಚನ ಸಂವಿಧಾನ ಕುರಿತಂತೆ ಹಿರಿಯ ನ್ಯಾಯವಾದಿಗಳಾದ ಡಾ. ಸಿ.ಎಸ್. ದ್ವಾರಕನಾಥ್ ಮಾತನಾಡಿ, ನಾನು ಕಾನೂನು ಪದವಿಯ ಜೊತೆಯಲ್ಲಿಯೇ ವಚನಗಳನ್ನೂ ಓದಲು ಆರಂಭಿಸಿದೆ. ಸಂವಿಧಾನದ ಅನುಚ್ಛೇದಗಳನ್ನು ಓದುವಾಗ ವಚನಗಳು, ವಚನಗಳನ್ನು ಓದುವಾಗ ಸಂವಿಧಾನದ ಅನುಚ್ಛೇದಗಳು ಕಣ್ಮುಂದೆ ಬರುತ್ತವೆ. ಸಂವಿಧಾನದ ಪ್ರತಿ ಅನುಚ್ಛೇದಕ್ಕೂ ನೂರಾರು ವಚನಗಳನ್ನು ಅಡಿಟಿಪ್ಪಣಿಯಾಗಿ ಕೊಡಬಹುದು. ಅಷ್ಟೇ ಅಲ್ಲದೆ `ಬುದ್ದ ಅಂಡ್ ಹಿಸ ಧಮ್ಮ’ದಲ್ಲಿರುವ ಅನೇಕ ಆಶಯಗಳೂ ವಚನ ಸಾಹಿತ್ಯದಲ್ಲಿ ಇವೆ ಎಂದರು.
ಕಾರ್ಲ್ ಮಾರ್ಕ್ಸ್ ಸಮಾನತೆಯ ಮಾತನಾಡುವ ಮುಂಚೆ ಅಂದರೆ ಆರು ಶತಮಾನಗಳ ಹಿಂದೆಯೇ ವಚನಕಾರರು ಈ ಬಗ್ಗೆ ಮಾತನಾಡಿದ್ದರು. ಆದರೆ `ಹಿತ್ತಲ ಗಿಡ ಮದ್ದಲ್ಲ’ ಎನ್ನುವಂತೆ ಉಪೇಕ್ಷೆಗೆ ಒಳಾಗಿದೆ. ಅಂಬೇಡ್ಕರ್ ಅವರ ಮೇಲೆ ಬುದ್ಧನಂತೆ ವಚನಕಾರರ ಆಲೋಚನೆಗಳು ಪ್ರಭಾವಬೀರಿವೆ ಎನ್ನುವುದಕ್ಕೆ ಬಸವಣ್ಣನವರ ಬಗ್ಗೆ ಅಂಬೇಡ್ಕರ್ ಬರೆದ ಮಾತುಗಳೇ ಸಾಕ್ಷಿ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ. ಜ್ಯೋತಿ, ಕೆ. ದಾಕ್ಷಾಯಣಿ ಮತ್ತು ಹೆಚ್. ಎಸ್ . ನಾಗರಾಜ್ ತಬಲ ಸಾಥಿ ಶರಣ್ ಕುಮಾರ್ ಸುಶ್ರಾವ್ಯವಾಗಿ ವಚನಗೀತೆಗಳನ್ನು ಹಾಡಿದರು. ಕಲ್ಯಾಣಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿರುವ ಸ್ನೇಹ ಸ್ವಾಗತಿಸಿದರು. ಹೊಳಲ್ಕೆರೆ ತಾಲ್ಲೂಕು ಚಿಕ್ಕಂದವಾಡಿಯ ಪ್ರಥಮದರ್ಜೆ ಗುತ್ತಿಗೆದಾರರಾದ ಟಿ. ರಾಜಶೇಖರಪ್ಪ ಕಾರ್ಯಕ್ರಮದ ದಾಸೋಹಿಗಳಾಗಿದ್ದರು.