ಜಗಳೂರು : ಪ್ರತಿಯೊಬ್ಬರೂ ಹಿರಿಯ ನಾಗರಿಕರನ್ನು ಗೌರವಿಸಬೇಕು

ಶಾಸಕ ಎಸ್.ವಿ.ರಾಮಚಂದ್ರ

ಜಗಳೂರು, ಸೆ.2- ಮುಪ್ಪು ಎಂಬುದು  ಎಲ್ಲರಿಗೂ ಕಟ್ಟಿಟ್ಟ ಬುತ್ತಿಯಾಗಿದ್ದು, ಪ್ರತಿಯೊಬ್ಬರೂ ಹಿರಿಯ ನಾಗರಿಕರನ್ನು ಗೌರವಿಸಬೇಕು,  ವೃದ್ಧರ ಅನುಕೂಲಕ್ಕಾಗಿ ಪಟ್ಟಣದಲ್ಲಿ  ವೃದ್ದಾಶ್ರಾಮ ಸ್ಥಾಪಿಸಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಎಸ್. ವಿ. ರಾಮಚಂದ್ರ ಹೇಳಿದರು.

ತಾಲ್ಲೂಕು ಹಿರಿಯ ನಾಗರಿಕರ ಸಂಘದ ವತಿಯಿಂದ ಶಾಸಕ ಎಸ್.ವಿ.ರಾಮಚಂದ್ರ, ಶಿವಮೊಗ್ಗ ಮಹಾನಗರಪಾಲಿಕೆಯ ಉಪ ಮಹಾಪೌರರಾದ ಸುರೇಖ ಮುರುಳೀಧರ್‌ ಅವರಿಗೆ  ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೊರೊನಾ ಹಾವಳಿಯಿಂದ  ಹಣಕಾಸಿನ ತೊಂದರೆಯಿದ್ದು ಮುಂದಿನ ವರ್ಷ ಗಾಂಧಿ ಭವನ ನಿರ್ಮಿಸಲು ಒತ್ತು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಪಟ್ಟಣದಲ್ಲಿ ರಂಗ ಮಂದಿರ, ಶಾಸಕರ ಕಚೇರಿ, ಆಡಿಟೋರಿಯಂ ನಿರ್ಮಾಣ ಮಾಡುತ್ತಿದ್ದು ಎಲ್ಲರಿಗೂ ಅನುಕೂಲವಾಗಲಿದೆ. ಪಟ್ಟಣದ ಅಭಿವೃದ್ಧಿಯ ಜೊತೆಗೆ ಸಿಸಿ ರಸ್ತೆ ಚರಂಡಿ ಮಾಡಲಾಗುತ್ತಿದೆ. ಒಳಚರಂಡಿ ವ್ಯವಸ್ಥೆಗೆ ಅನುಮತಿ ದೊರೆತಿದೆ ಎಂದರು.

ಶಿವಮೊಗ್ಗದ ಉಪ ಮಹಾ ಪೌರರಾದ ಸುರೇಖ ಮಾತನಾಡಿ,  ಹಿರಿಯರನ್ನು ನಾವು ಮನೆಯಲ್ಲಿ ಗೌರವಿಸಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದ ಅವರು, ಹಲವಾರು ಸನ್ಮಾನಗಳು ದೊರೆತಿರಬಹುದು. ಆದರೆ ತವರಿನಲ್ಲಿ ದೊರೆಯುವ ಸನ್ಮಾನಕ್ಕೆ ಬೆಲೆ ಕಟ್ಟಲಾಗದು ಎಂದು ಹೇಳಿದರು.

ಹಿರಿಯ ನಾಗರಿಕರ ಸಂಘದ ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಜಗಳೂರು ಪಟ್ಟಣದಲ್ಲಿ ಹುಟ್ಟಿದ ಮಹಿಳೆ ಇಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಉಪ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ಶಾಸಕ ರಾಮಚಂದ್ರ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು  ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ  ತಾಲ್ಲೂಕು ಹಿರಿಯ ನಾಗರಿಕರ ಸಂಘದ ಪಧಾದಿಕಾರಿಗಳು ಮತ್ತು ನಿವೃತ್ತ ಶಿಕ್ಷಕ ಜಿ.ವಿ.ನಾರಾಯಣ ಸ್ವಾಮಿ, ಜಿ.ಪಂ ಮಾಜಿ ಸದಸ್ಯ ಹೆಚ್. ನಾಗರಾಜ್, ಬಿಸ್ತುವಳ್ಳಿ ಬಾಬು, ಬಿದರಕೆರೆ ರವಿಕುಮಾರ್, ಡಿ.ವಿ.ನಾಗಪ್ಪ, ವಕೀಲ ತಿಪ್ಪೇಸ್ವಾಮಿ ಸೇರಿದಂತೆ, ಹಿರಿಯ ನಾಗರಿಕರು ಹಾಜರಿದ್ದರು.

error: Content is protected !!