ಕೊರೊನಾ ಅಡಕತ್ತರಿಯಲ್ಲಿ ಟೈಲರ್ ಬದುಕು

ದಾವಣಗೆರೆ, ಆ. 9 – ಕೊರೊನಾ ಕಾರಣ ದಿಂದ ಹೇರಲಾಗಿದ್ದ ಲಾಕ್‌ಡೌನ್‌ಗಳು ಹಂತ ಹಂತವಾಗಿ ಅನ್‌ಲಾಕ್ ಆಗುತ್ತಿದ್ದರೂ, ಟೈಲರ್‌ಗಳ ಹೊಟ್ಟೆ ಪಾಡು ಇನ್ನೂ ಅನ್‌ಲಾಕ್‌ ಆಗದೇ ಸಂಕಟದಲ್ಲೇ ಇದೆ.

ಬದುಕಲು ‍§ರೋಟಿ, ಕಪ್ಡಾ, ಮಕಾನ್’ (ಊಟ, ಬಟ್ಟೆ, ವಸತಿ) ಅನಾದಿ ಕಾಲದಿಂದಲೂ ಮೂಲಭೂತ ಅಗತ್ಯ. ಆದರೆ, ಕೊರೊನಾ ದಿಂದಾಗಿ ಮೂಲಭೂತ ಅಗತ್ಯಗಳನ್ನೂ ಸಹ ಹಿತಮಿತವಾಗಿ ಬಳಸುವಂತಾಗಿದೆ.

ಕೊರೊನಾ ಅನ್‌ಲಾಕ್‌ ನಂತರ ಹಲ ವಾರು ವಲಯಗಳು ಚೇತರಿಕೆ ಕಾಣುತ್ತಿದ್ದರೂ, ಜನರು ಬಟ್ಟೆ ಬರೆಗೆ ಮೊದಲಿನಂತೆ ಖರ್ಚು ಮಾಡಲು ಹಿಂಜರಿಯು  ತ್ತಿದ್ದಾರೆ. ಜನರು ತಮ್ಮ ಜೇಬಿನಲ್ಲಿರುವ ದುಡ್ಡಿಗೆ ಹಾಕಿರುವ ಲಾಕ್‌ಗ ಳನ್ನು ಇನ್ನೂ ತೆರೆಯದ ಕಾರಣ ಟೈಲರ್‌ಗಳಿಗೆ ಇನ್ನೂ §ಅಚ್ಛೇ ದಿನ್’ಗಳು ಸಿಗುತ್ತಿಲ್ಲ.

ಕೊರೊನಾ ಕಾರಣದಿಂದಾಗಿ ಹಬ್ಬಗಳು, ಮದುವೆಗಳು ಸರಳವಾಗಿಯೇ ಮುಗಿಯುತ್ತಿವೆ. ಶಾಲೆಗಳು ಮತ್ತೆ ತೆರೆದಿಲ್ಲ. ಹೀಗಾಗಿ ಹೊಸ ಬಟ್ಟೆ ಗಳ ಬೇಡಿಕೆ ಅಷ್ಟಕ್ಕಷ್ಟೇ ಎಂಬಂತಾಗಿದೆ. ಬಟ್ಟೆ ಗಳಿಂದ ಕೊರೊನಾ ಹರಡುತ್ತದೆ ಎಂಬ ಸುದ್ದಿಗಳು ಹಲವು ತಿಂಗಳು ಜನರನ್ನು ಕಂಗಾಲು ಮಾಡಿದ್ದವು.

ಬಟ್ಟೆಗಳನ್ನು ಅಗತ್ಯ ವಸ್ತುಗಳ ಸೇವೆಗೆ ಸೇರ್ಪಡೆ ಮಾಡದೆ ಬಟ್ಟೆಗಳ ವ್ಯಾಪಾರ ಬಂದ್ ಆಗಿತ್ತು. 21 ದಿನ ಎಂದು ಆರಂಭವಾದ ಲಾಕ್‌ಡೌನ್, ಒಂದೂವರೆ ತಿಂಗಳವರೆಗೆ ಎಳೆದ ನಂತರ ಬಟ್ಟೆ ಅಂಗಡಿಗಳು
ಮತ್ತೆ ತೆರೆದವು. 

ಅನ್‌ಲಾಕ್‌ ಆರಂಭವಾಗಿ ಸುಮಾರು ಎರಡು ತಿಂಗಳು ಕಳೆದರೂ ಸಹ ಬಟ್ಟೆ ಅಂಗಡಿಗಳಿಂದ ಕೊರೊನಾ ಹರಡಿದ ಸುದ್ದಿ ಬಂದಿಲ್ಲ. ಆದರೂ, ಸಾಕಷ್ಟು ಜನರು ಬಟ್ಟೆ ಅಂದರೆ ಬೇಡ ಬಿಡಪ್ಪ ಎನ್ನುವುದನ್ನು ನಿಲ್ಲಿಸಿಲ್ಲ.

ಹೊಲಿಯಲು ಬಟ್ಟೆಗಳು ಬರುತ್ತಿಲ್ಲ. ಮನೆಯಲ್ಲಿ ಸುಮ್ಮನೆ ಕೂರಲಾಗದೇ ಅಂಗಡಿ ತೆರೆದುಕೊಂಡು ಕೂರುತ್ತಿದ್ದೇನೆ. ಪರಿಚಯದವರಿಗೆ ಕರೆ ಮಾಡಿ ಫ್ರೀ ಆಗಿದ್ದೇನೆ, ಬಟ್ಟೆ ಹೊಲಿಸಿಕೊಳ್ಳಿ ಎಂದರೆ ಈಗ ಬೇಡ ಕೊರೊನಾ ಇದೆ ಎಂಬ ಉತ್ತರವೇ ಸಿಗುತ್ತಿದೆ. 

ಇನ್ನೆರಡು ತಿಂಗಳು ನೋಡಿ ಬಟ್ಟೆ ಅಂಗಡಿ ಮುಚ್ಚುತ್ತೇನೆ ಎಂದು ಕೆ.ಟಿ.ಜೆ. ನಗರದ ಟೈಲರ್ ಸುರೇಶ್ ಹೇಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ರೆಡಿಮೇಡ್ ಬಟ್ಟೆಗಳೇ ಹೆಚ್ಚಾಗುತ್ತಿವೆ. §ಯಜಮಾನ್ರು’ ಮಾತ್ರ ಹೊಲಿಸಿದ ಬಟ್ಟೆಯೇ ಬೇಕು ಎನ್ನುತ್ತಾರೆ. ಆ ಸಮಸ್ಯೆ ಸಾಲದು ಎಂಬಂತೆ, ಕೊರೊನಾ ಬಂದ ಮೇಲೆ ಬಟ್ಟೆ ಹೊಲಿಸಲು ಬೇಡಿಕೆಯೇ ಇಲ್ಲ. ಒಂದಿಷ್ಟು ಮಾಸ್ಕ್ ಹೊಲಿದು ಹೊಟ್ಟೆ ತುಂಬಿಸಿಕೊಳ್ಳುವಂತಾಗಿದೆ. ಬೇರೆ ಯಾವುದಾದರೂ ವೃತ್ತಿಯಲ್ಲಿ ತೊಡಗಿಕೊಳ್ಳಲು ಯೋಚಿಸುತ್ತಿದ್ದೇನೆ ಎಂಬುದು ನಗರದ ಟೈಲರ್ ಸೋಮಶೇಖರ್ ಮನದಿಂಗಿತ.

ಎಲ್ಲರ ಪರಿಸ್ಥಿತಿ ಹೀಗೆಯೇ ಎಂದೇನೂ ಇಲ್ಲ. ಮಾರ್ಚ್ ನಂತರ ಮುಂದೂಡಲ್ಪಡುತ್ತಾ ಬಂದಿದ್ದ ಮದುವೆಗಳು, ಕೊನೆಗೂ ಶುರುವಾಗಿವೆ. ಹೀಗಾಗಿ ಲೇಡೀಸ್ ಟೈಲರ್‌ಗಳ ಡಿಮ್ಯಾಂಡ್ ಮತ್ತೆ ಕುದುರಿಕೊಂಡಿದೆ.

ಹೆಣ್ಮಕ್ಕಳು ಒಂದೆರಡು ತಿಂಗಳು ಕೊರೊನಾ ಎಂದು ಬಟ್ಟೆ
ಹೊಲಿಸುವುದನ್ನು ಮುಂದೂಡುತ್ತಾ ಬಂದಿದ್ದರು. ಯಾವಾಗ ಕೊರೊನಾ ನಾಲ್ಕು ದಿನದ ಅತಿಥಿ ಅಲ್ಲ, ಬಹು ದಿನಗಳ ಜೊತೆಗಾರ ಎಂಬುದು ಗೊತ್ತಾಯಿತೋ ಮತ್ತೆ ಬಟ್ಟೆ ಹೊಲಿಸಲು ಆರಂಭಿಸಿದ್ದಾರೆ ಎಂದು ಎಂಸಿಸಿ `ಬಿ’ ಬ್ಲಾಕ್‌ನ ಲೇಡೀಸ್ ಟೈಲರ್ ಲಲಿತ ತಿಳಿಸಿದ್ದಾರೆ.

ಒಂದೆರಡು ಬಾರಿ ಮುಂದೂಡಲ್ಪಟ್ಟಿದ್ದ ಮದುವೆಗಳು ಈಗ ಅನಿವಾರ್ಯವಾಗಿ ಕೊರೊನಾ ಕಾಲದಲ್ಲೇ ನೆರವೇರುತ್ತಿವೆ. ಮತ್ತೆ ಮದುವೆಯ ಸೀಸನ್ ಹಾಗೂ ಗೌರಿ – ಗಣಪತಿ ಹಬ್ಬದ ಸೀಸನ್ ಬಂದಿದೆ. ಎರಡು ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ಖಾಲಿ ಕೈ ಆಗಿದ್ದ ನಮ್ಮ ಕೈ ತುಂಬ ಈಗ ಕೆಲಸವಿದೆ ಎಂದವರು ಹೇಳುತ್ತಾರೆ.

ಆದರೆ, ಬಡ ಹಾಗೂ ಮಧ್ಯಮ ವರ್ಗದವರು ಸಂಭ್ರಮದಿಂದ ಉಡುಗೆ ತೊಡುಗೆಗೆ ಪರ್ಸ್ ಅನ್‌ಲಾಕ್‌ ಮಾಡುವ ಕಾಲ ಬರದೆ ಎಲ್ಲ ಟೈಲರ್‌ಗಳ ಪರಿಸ್ಥಿತಿ ಸುಧಾರಿಸದು. ಕೊರೊನಾ ಕೊನೆಯಾಗುವ ಕಾಲಕ್ಕೆ ಕಾಯುವುದೇ ಸದ್ಯಕ್ಕೆ ಸಾಕಷ್ಟು ಟೈಲರ್‌ಗಳ ಕಾಯಕವಾಗುತ್ತಿದೆ.

error: Content is protected !!