ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಕನಸು, ನಾವು ಬೊಗಳೆ ಮಾತುಗಳನ್ನು ಆಡುವವರಲ್ಲ. ಕೆಲಸ ಮಾಡಿ ತೋರಿಸುವವರು : ಸಂಸದ ಜಿ.ಎಂ.ಸಿದ್ದೇಶ್ವರ
ಜಗಳೂರು, ಆ.29- ನಾವು ಬೊಗಳೆ ಮಾತು ಆಡುವವರಲ್ಲ. ಕೆಲಸ ಮಾಡಿ ತೋರಿಸುವವರು. ಶಾಸಕ ಎಸ್.ವಿ.ರಾಮಚಂದ್ರ ಮತ್ತು ನಾನು ಕೊರೊನಾ ಮಧ್ಯೆಯೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಮನ ಹರಿಸಿದ್ದೇವೆ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಕನಸಾಗಿದೆ. ನಾವು ಬೊಗಳೆ ಮಾತುಗಳನ್ನು ಆಡುವವರಲ್ಲ, ಟೀಕಾಕಾರರಿಗೆ ಕೆಲಸ ಮಾಡಿ ತೋರಿಸುವವರು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ತಾಲ್ಲೂಕಿನ ಬುಳ್ಳೆನಹಳ್ಳಿ ಗ್ರಾ ಮದಲ್ಲಿ ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ 8 ಕೊಟಿ 26 ಲಕ್ಷ ರೂ ವೆಚ್ಚದಲ್ಲಿ ಬುಳ್ಳೇನ ಹಳ್ಳಿ, ಪೇಟೆ ಕಣ್ವಕುಪ್ಪೆ, ಚಿಕ್ಕಮ್ಮನ ಹಟ್ಟಿ ರಸ್ತೆಯವರೆಗೆ ಸುಮಾರು 10 ಕಿ.ಮೀ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಹಾಗೂ ಪಟ್ಟಣದ ಗುರುಭವನದ ಮುಂಭಾಗದಲ್ಲಿ
1 ಕೋಟಿ 60 ಲಕ್ಷ ರೂ ವೆಚ್ಚದಲ್ಲಿ ರಂಗಮಂದಿರ, ಶಾಸಕರ ಕಛೇರಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಮಚಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗುವ ಮೂಲಕ ರಾಜ್ಯ ಮಟ್ಟದಲ್ಲಿ ಸ್ಥಾನಮಾನ ದೊರೆತಿದ್ದರೂ ಸಹ ತಾಲ್ಲೂಕಿನಲ್ಲಿ ನಿರಂತರ ಸಂಚಾರ ಮಾಡಿ, ಜನರ ಸಂಕಷ್ಟ ಅರಿಯುವ ಕೆಲಸ ಮಾಡುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯ ಜಾರಿಗೊ ಳಿಸಿ ಬರದ ನಾಡನ್ನು ಹಸಿರಾಗಿಸಲು ಶ್ರಮಿಸುತ್ತಿದ್ದಾರೆ ಎಂದರು.
ಜಗಳೂರು ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 23 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪ್ರಥಮ ಹಂತದಲ್ಲಿ 140 ಕೋಟಿ ಅನುದಾನ ಬಿಡುಗಡೆಯಾಗಿದ್ದು, 160 ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೇಂದ್ರ
ಮತ್ತು ರಾಜ್ಯದಲ್ಲಿ ಒಂದೇ ಸರಕಾರ ಅಧಿಕಾರದಲ್ಲಿರುವುದರಿಂದ ಅನು ದಾನ ಬಿಡುಗಡೆಯಾಗಲು ಸಹಕಾರಿಯಾಗಿದೆ ಎಂದರು.
ಈ ರಸ್ತೆ ಕಾಮಗಾರಿ ಮಾಡಿದ ಗುತ್ತಿಗೆದಾರರು 10 ವರ್ಷಗಳ ನಿರ್ವಹಣೆ ಮಾಡಬೇಕು. ಈ ಅವಧಿ ಯಲ್ಲಿ ಗುಂಡಿಗಳು ಬಿದ್ದರೆ ಅವರೇ ಮುಚ್ಚಬೇಕು. 5 ವರ್ಷದ ನಂತರ ರಸ್ತೆಗೆ ಮರುಡಾಂಬರು ಹಾಕಬೇಕು. ಗುಣಮಟ್ಟದ ಕಾಮಗಾರಿ ಮಾಡ ಬೇಕು ಗ್ರಾಮಸ್ಥರು ಕೂಡ ಇದರ ಬಗ್ಗೆ ಗಮನ ಹರಿಸಬೇಕು ಎಂದರು.
ಸಿರಿಗೆರೆ ಶ್ರೀಗಳ ಆಶೀರ್ವಾದ ದಿಂದ ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಮುಂದಿನ ವರ್ಷ ಕೆರೆಗಳಿಗೆ ನೀರು ಹರಿದು ಬರಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿಯೂ ಸಹ ಜಗಳೂರಿಗೆ ನೀರು ಬರಲಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷರೂ, ಶಾಸಕ ರಾಮಚಂದ್ರ ಮಾತನಾಡಿ, ಕೊರೊನಾ ಹಾವಳಿ ನಡುವೆಯೂ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ. ರಂಗಮಂದಿರ, ಶಾಸಕರ ಕಛೇರಿ ನಿರ್ಮಿಸಲಾಗುತ್ತಿದೆ. ಬಿದರಕೆರೆ ರಸ್ತೆ, ದ್ವಿಮುಖ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಯಾವುದೇ ಕಾಮಗಾರಿ ಕಳಪೆಯಾಗಲು ಬಿಡುವುದಿಲ್ಲ. ಪಟ್ಟಣವನ್ನು ಸುಂದರ ನಗರವನ್ನಾಗಿ ಮಾಡಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಸಂಸದರ 50 ಹೈಮಾಸ್ಟ್ ದೀಪಗಳು ಸೇರಿದಂತೆ ನಾನೂ ಕೂಡ 100ಕ್ಕೂ ಅಧಿಕ ದೀಪಗಳನ್ನು ಅಳವಡಿಸಿದ್ದೇನೆ. ಜೊತೆಗೆ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲಾಗುತ್ತಿದೆ. ಸಂಸದರ ಮಾರ್ಗದರ್ಶನದಲ್ಲಿ ಹೆಚ್ಚಿನ ಅನುದಾನ ಬಂದಿದೆ ಎಂದು ಶಾಸಕರು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ, ಜಿ.ಪಂ. ಸದಸ್ಯರಾದ ಎಸ್.ಕೆ.ಮಂಜುನಾಥ್, ಶಾಂತಕುಮಾರಿ, ಸವಿತಾ ಕಲ್ಲೇಶಪ್ಪ, ಉಮಾ ವೆಂಕಟೇಶ್, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಬಿಜೆಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪಲ್ಲಾಗಟ್ಟೆ ಹೆಚ್.ಸಿ.ಮಹೇಶ್, ಮುಖಂಡರಾದ ಡಿ.ವಿ.ನಾಗಪ್ಪ, ಹೆಚ್.ನಾಗರಾಜ್, ಕಸ್ತೂರಿಪುರ ಶಿವಣ್ಣ, ಬಿಸ್ತುವಳ್ಳಿ ಬಾಬು, ಶ್ರೀನಿವಾಸ್, ವಕೀಲ ತಿಪ್ಪೇಸ್ವಾಮಿ, ಕೆ. ಪ್ರಭು, ಪ.ಪಂ. ಸದಸ್ಯರಾದ ಆರ್.ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ನವೀನ್, ಪ್ರಧಾನ ಮಂತ್ರಿ ಗ್ರಾಮ ಸಡಕ್ನ ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗುತ್ತಿಗೆದಾರರು ಸೇರಿದಂತೆ ಮತ್ತಿತರರು ಹಾಜರಿದ್ದರು.