ಹರಪನಹಳ್ಳಿ, ಆ.29- ಕುಟುಂಬದ ಆರ್ಥಿಕ ಹೊರೆ ನೀಗಿಸಲು ಹಾಗೂ ಸ್ವಾಲಂಬಿಯಾಗಿ ಮಹಿಳೆ ದುಡಿಮೆ ಮಾಡಲು ಗುಡಿ ಕೈಗಾರಿಕೆ ಸಹಕಾರಿಯಾಗಲಿದೆ ಎಂದು ನೀಲಗುಂದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿಯ ವಿಕಲಚೇತನ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಜಿಲ್ಲಾ ಪಂಚಾಯ್ತಿಯ ಸದಸ್ಯರ ಅನುದಾನದಲ್ಲಿ ವಿದ್ಯುತ್ ಚಾಲಿತ ರಾಟೆಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಯಿಂದಲೂ ರೈತರಿಗೆ ನಿರಂತರ ಆದಾಯ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅದರ ಜೊತೆ ಮಹಿಳೆ ಬಟ್ಟೆ ಹೊಲಿಯುವುದು, ಬುಟ್ಟಿ, ಕೈಚೀಲ ಮುಂತಾದ ಸಾಮಗ್ರಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವುದರಿಂದಲೂ ಕುಟುಂಬದ ಅರ್ಥಿಕ ಹೊರೆ ತಗ್ಗಿಸಲು ದಾರಿಯಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಿರುವುದ ರಿಂದ ಸಮಾನತೆಯು ಸೃಷ್ಟಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ವಿದ್ಯುತ್ ಚಾಲಿತ ರಾಟೆಗಳನ್ನು ವಿತರಿಸಲಾಯಿತು. ಇಓ ಅನಂತರಾಜ್, ಎಂಆರ್‍ಡಬ್ಲ್ಯೂ ಆರ್.ಧನರಾಜ್, ಕೈಗಾರಿಕೆ ವಿಸ್ತರಣಾಧಿಕಾರಿ ಸೌಮ್ಯ ಮತ್ತು ಇತರರು ಭಾಗವಹಿಸಿದ್ದರು.