ಮುಂಬರುವ ದಿನಗಳಲ್ಲಿ ದಾವಣಗೆರೆ ತಂಬಾಕು ಮುಕ್ತ ನಗರ ಘೋಷಣೆ

ದಾವಣಗೆರ, ಆ.27- ನಗರವು ತಂಬಾಕು ಮುಕ್ತವಾಗುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ನಗರವನ್ನು ತಂಬಾಕು ಮುಕ್ತ ಎಂದು ಘೋಷಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೋಡಲ್ ಅಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಡಿಯ ಜಿಲ್ಲಾವಾರು ಸಮನ್ವಯ ಸಮಿತಿ (ಡಿಎಲ್‍ಸಿಸಿ)ಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೊದಲನೇ ಆದ್ಯತೆಯಾಗಿ ಸೆಕ್ಷನ್ 6ಬಿ ಶೈಕ್ಷಣಿಕ ಸಂಸ್ಥೆಗಳ ಆವರಣದ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ನಗರದಾದ್ಯಂತ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಇದು ಜಾರಿಯಾದ ನಂತರ ತಂಬಾಕು ಮುಕ್ತ ನಗರವನ್ನಾಗಿ ಘೋಷಿಸಲಾಗುವುದು ಎಂದರು.

ಶಾಲಾ ಆವರಣದಲ್ಲಿನ ಡಬ್ಬಿ ಹಾಗೂ ಪೆಟ್ಟಿಗೆ ಅಂಗಡಿಗಳಲ್ಲಿ ಒಳಗಡೆ ತಂಬಾಕು ಉತ್ಪನ್ನ ಇಟ್ಟು ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಈ ಕುರಿತು ಕ್ರಮ ವಹಿಸುವುದು ಸೂಕ್ತ ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಹೇಳಿದರು. ಇದಕ್ಕೆ ಅಪರ ಜಿಲ್ಲಾಧಿಕಾರಿ ಉತ್ತರಿಸಿ, ಆ ರೀತಿಯ ಅಂಗಡಿಗಳ ಕುರಿತು ಪಟ್ಟಿ ಮಾಡಿ ಕೊಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ದಾಳಿ ಹೆಚ್ಚಿಸಿ: ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ, ದಂಡ ವಿಧಿಸುವುದಲ್ಲದೆ, ಪ್ರಕರಣಗಳನ್ನು ದಾಖಲಿಸಲು ಜಿಲ್ಲೆಯಾದ್ಯಂತ ದಾಳಿಗಳನ್ನು ಆಯಾ ತಾಲ್ಲೂಕು ತಹಶೀಲ್ದಾರರು ಹೆಚ್ಚಿಸಬೇಕು ಎಂದು ತಿಳಿಸಿದರು.

ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ, ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಚಾರ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿ ಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಸತೀಶ್ ಕಲಹಾಳ್ ಮಾತನಾಡಿ, ತಂಬಾಕು ಮುಕ್ತ ದಾವಣಗೆರೆ ಮಾಡುವ ನಿಟ್ಟಿನಲ್ಲಿ  ದಾಳಿ ನಡೆಸಿ ಒಟ್ಟು 3965 ಪ್ರಕರಣಗಳನ್ನು ದಾಖಲಿಸಿ ರೂ. 3,96,669 ದಂಡ ಸಂಗ್ರಹಿಸಲಾಗಿದೆ ಎಂದರು.

ಸಭೆಯಲ್ಲಿ ಜೆಜೆಎಂ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನವೀನ್,  ಕಾರ್ಯಕ್ರಮಾಧಿಕಾರಿ ಡಾ.ಕೆ.ಎಚ್.ಗಂಗಾಧರ್, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್, ತಹಶೀ ಲ್ದಾರ್‍ಗಳಾದ ನಾಗವೇಣಿ, ತನುಜಾ ಇತರರಿದ್ದರು.

error: Content is protected !!