ಜಗಳೂರು, ಆ. 21- ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ತೀವ್ರ ಹಾನಿಗೆ ಪರಿಹಾರ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಇಂದು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ಪ್ರವಾಸಿ ಮಂದಿರದಿಂದ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ತಾಲ್ಲೂಕು ಕಛೇರಿ ಮುಂಭಾಗ ಮಾತನಾಡಿದ ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಕೋವಿಡ್-19 ಇಡೀ ಮನುಕುಲವನ್ನೇ ಆಂತಕಕ್ಕೀಡುಮಾಡಿದೆ. ಈ ವೈರಾಣುವಿನ ದಾಳಿಗೆ ಸಿಕ್ಕಿ ರಾಜ್ಯದ ಜನರು ಜೀವನ್ಮರಣ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ಈ ವಿಷಯದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಎಸಗಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹ್ಮದ್ ಮಾತನಾಡಿ, ಕೋವಿಡ್ -19 ನಿಯಂತ್ರಿಸಲು ಸರ್ಕಾರ ಖರೀದಿಸಿರುವ ಸಾಮಗ್ರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕರ್ನಾಟಕ ಸರ್ಕಾರವು 8 ವಿಧದ ಇಲಾಖೆಗಳಿಂದ ಇದುವರೆಗೆ 4167 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ವೆಂಟಿಲೇಟರ್, ಪಿಪಿಇ ಕಿಟ್‌ಗಳು, ಆಕ್ಸಿಜನ್ ಉಪಕರಣಗಳು ಹಾಗೂ ಥರ್ಮಲ್ ಸ್ಕ್ಯಾನರ್‌ಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ 83 ಲಕ್ಷ ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ನೀಡುತ್ತೇವೆ ಎಂದು ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದ ರಾಜ್ಯ ಸರ್ಕಾರ ಎಲ್ಲಿಗೆ ಯಾರಿಗೆ, ಎಲ್ಲಿಗೆ ಎಷ್ಟು ನೀಡಿದ್ದೇವೆ ಎಂಬ ವಿವರಗಳು ಲಭ್ಯವಿಲ್ಲ. 13 ಲಕ್ಷ ವಲಸೆ ಕಾರ್ಮಿಕರಿಗೆ ಒಂದು ಊಟಕ್ಕೆ 1200 ಬಿಲ್ ಮಾಡಿದ್ದಾರೆ. ಒಬ್ಬ ವ್ಯಕ್ತಿಗೆ 14 ದಿನಗಳ ಚಿಕಿತ್ಸೆ ಕೊಡಿಸಲು ರೂ. 3,50,000 ಖರ್ಚಾಗಿದೆ ಎಂದು ಸರ್ಕಾರ ಲೆಕ್ಕ ತೋರಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಬೈರೇಶ್, ಜಿ.ಬಿ. ಕರಿಬಸವನಗೌಡ, ಕಮ್ಮತ್ತಳ್ಳಿ ಮಂಜಣ್ಣ, ಎಸ್ಸಿ ಘಟಕದ ತಾಲ್ಲೂಕು ಅಧ್ಯಕ್ಷ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಕೆಂಚಮ್ಮ ಧನ್ಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಕುಬೇಂ ದ್ರಪ್ಪ, ಚಂದ್ರಶೇಖರ್, ಮುದ್ದೇಗೌಡರ ಬಸವರಾಜ್, ಗಿರೀಶ್ ಒಡೆಯರ್, ಮರೆನಹಳ್ಳಿ ಚಂದ್ರಶೇಖರ್, ಅಕ್ಷಯ್ ಕುಮಾರ್, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.