ಮಲೇಬೆನ್ನೂರು, ಆ.21- ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ದಗೊಂಡಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ 2 ಕೋಟಿ ರೂ. ಅನುದಾನ ಈ ಕಾಮಗಾರಿಗೆ ಬಂದಿದ್ದು, ಮಠದ ಭಕ್ತರಿಂದ 1.50 ಕೋಟಿ ರೂ.ಗಳನ್ನು ಖರ್ಚು ಮಾಡಿ, ಕೇವಲ 8 ತಿಂಗಳಲ್ಲೇ ಈ ಹಾಸ್ಟೆಲ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ `ಜನತಾವಾಣಿ’ಗೆ ತಿಳಿಸಿದ್ದಾರೆ.
36 ಕೊಠಡಿಗಳನ್ನು ಹೊಂದಿರುವ ಈ ಹಾಸ್ಟೆಲ್‌ನಲ್ಲಿ 250 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಲ್ಲದೇ, ದಾಸೋಹ ಭವನ, ಅಡುಗೆ ಮನೆ ಮತ್ತು ಸಾಂಸ್ಕೃತಿಕ ಭವನವನ್ನೂ ಇದರಲ್ಲಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಠದ ಮುಖ್ಯ ದ್ವಾರಬಾಗಿಲು, ಸಮುದಾಯ ಭವನ ಹಾಗೂ ದಾರ್ಶನಿಕರ ಪ್ರತಿಮೆಗಳ ಅನಾವರಣವನ್ನು ಕಳೆದ ಏಪ್ರಿಲ್ ತಿಂಗಳಲ್ಲಿ ನಿಧಿ ಮಾಡಲಾಗಿತ್ತು. ಅದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದರು. ಕೊರೊನಾ ಲಾಕ್‌ಡೌನ್‌ನಿಂದಾಗಿ ಕಾರ್ಯಕ್ರಮವನ್ನು ರದ್ದು ಮಾಡಿದ್ದೆವು. ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಮತ್ತೆ ಸಿಎಂ, ಮಾಜಿ ಸಿಎಂ ಅವರ ದಿನಾಂಕ ಪಡೆದು, ಹಾಸ್ಟೆಲ್ ಉದ್ಘಾಟನೆಯ ಜೊತೆಗೆ ಕಲ್ಯಾಣ ಮಂಟಪ, ದ್ವಾರ ಬಾಗಿಲು ಹಾಗೂ ದಾರ್ಶನಿಕರ ಪ್ರತಿಮೆಗಳನ್ನು ಉದ್ಘಾಟಿಸುವ ಉದ್ದೇಶವಿದೆ ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ತಿಳಿಸಿದ್ದಾರೆ.