ಬಸವಾಪಟ್ಟಣದಲ್ಲಿ ಜಿ.ಪಂ. ಸದಸ್ಯ ಬಸವಂತಪ್ಪ ಖಂಡನೆ
ಮಾಯಕೊಂಡ, ಆ.21- ರಾಜ್ಯದಲ್ಲಿ ಕೋವಿಡ್-19ರ ಸಾಮಗ್ರಿಗಳ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಹೆಣದ ಮೇಲೆ ಹಣ ಮಾಡಲು ಹೊರಟಂತಿರುವ ರಾಜ್ಯ ಸರ್ಕಾರದ ಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ ಬಸವಾಪಟ್ಟಣದಲ್ಲಿನ ಪ್ರತಿಭಟನೆಯಲ್ಲಿ ಖಂಡಿಸಿದರು.
ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಿ, ಕಾರ್ಪೋರೇಟ್ ಗುಲಾಮಗಿರಿ ನಿಲ್ಲಿಸಲು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಆಗ್ರಹಿಸಿದ ಅವರು, ಕೃಷಿ ವಿರೋಧಿ ನೀತಿಗೆ ಕೈಗನ್ನಡಿಯಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ಒತ್ತಾಯಿಸಿದರು.
ರೈತರ ಹಾಗೂ ಕೃಷಿ ಕಾರ್ಮಿಕರ ಬದುಕಿಗೆ ಮಾರಕವಾಗಿರುವ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಹಿತಕಾಯುವ ಎಪಿಎಂಸಿ ತಿದ್ದುಪಡಿ ಕಾಯ್ದೆಯ ವಿರುದ್ಧ ಹಾಗೂ ಕಾರ್ಮಿಕ ಕಾಯ್ದೆಯನ್ನು ಹಿಂಪಡೆದು, ಕಾರ್ಮಿಕರನ್ನು ಮಾಲೀಕರ ಗುಲಾಮರನ್ನಾಗಿ ಮಾಡಲು ಹೊರಟಿರುವುದು ವಿಷಾಧನೀಯವಾದ ಸಂಗತಿಯಾಗಿದೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಮಹಿಳಾ ಮುಖಂಡರಾದ ಶ್ರೀಮತಿ ಶಶಿಕಲಾ, ಕತ್ತಲಗೆರೆ ತಿಪ್ಪಣ್ಣ ಅವರುಗಳು ಮಾತನಾಡಿದರು.
ಪ್ರತಿಭಟನೆಯಲ್ಲಿ ತಾ.ಪಂ. ಸದಸ್ಯರಾದ ಶ್ರೀಮತಿ ಜ್ಯೋತಿ ಪ್ರಕಾಶ್, ಹನುಮಂತಪ್ಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಿದಾಯತ್, ಮುಖಂಡರಾದ ಆಲಂಪಾಷಾ ಹಾಗೂ ಮತ್ತಿತರರಿದ್ದರು.