ನ್ಯಾಮತಿ, ಆ.19- ಶ್ರಾವಣ ಮಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ರಾಂಪುರ ಶ್ರೀ ಹಾಲಸ್ವಾಮೀಜಿ ಮಠ, ಗುಂಡೇರಿ, ಬಸವಾಪಟ್ಟಣ ಗವಿಮಠದಲ್ಲಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಪೂಜಾ ಅನುಷ್ಠಾನವನ್ನು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಸಂಪನ್ನಗೊಳಿಸಿದರು.
ಕಳೆದ ತಿಂಗಳ 15 ರಂದು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಮಠಾಧೀಶರಾಗಿದ್ದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಕೋವಿ ಡ್ನಿಂದ ಲಿಂಗೈಕ್ಯರಾಗಿದ್ದರು. ಅದರೂ ಶ್ರೀ ಮಠಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದ ಉಸ್ತುವಾರಿ ವಹಿಸಿದ್ದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಮಠಾಧೀಶ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ನಡೆಸುತ್ತಾ ಬಂದಿದ್ದರು.
ನಾಡಿನಲ್ಲಿ ಶ್ರಾವಣ ಮಾಸವು ತನ್ನದೇ ಆದ ವಿಶೇಷ ಪರಂಪರೆ ಮತ್ತು ವೈಶಿಷ್ಟ್ಯವನ್ನು ಹೊಂದಿದೆ. ಹಬ್ಬಗಳ ನಾಡಾದ ಇಲ್ಲಿ ಈ ತಿಂಗಳಿನಿಂದ ಹಬ್ಬಗಳು ಪ್ರಾರಂಭವಾಗುತ್ತವೆ. ಶ್ರಾವಣದಲ್ಲಿ ಉತ್ತಮವಾದ ಆಧ್ಯಾತ್ಮಿಕ ವಿಚಾರಗಳನ್ನು ಶ್ರವಣ ಮಾಡುವುದರಿಂದ ಜೀವನದಲ್ಲಿ ಶಾಂತಿ – ನೆಮ್ಮದಿ ಸಿಗುತ್ತದೆ ಎಂದು ಶ್ರೀ ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಹೇಳಿದರು.
ಜಗತ್ತು ಇಂದು ಕೊರೊನಾದಿಂದ ನಲುಗಿದ್ದು, ಇತ್ತೀಚಿಗೆ ಕರ್ನಾಟಕದಲ್ಲಿ ನೆರೆ ಹಾವಳಿ, ಕೋವಿಡ್ನಿಂದ ಸೇರಿದಂತೆ ಹಲವಾರು ವೈಪರೀತ್ಯಗಳು ಆಗುತ್ತಿವೆ. ಈ ಎಲ್ಲಾ ಸಮಸ್ಯೆಗಳಿಂದ ಜಗತ್ತು ಮುಕ್ತವಾಗಿ, ಶಾಂತಿ ನೆಮ್ಮದಿ ದೊರೆಯುವಂತೆ ಮಾಡುವ ಸಂಕಲ್ಪದಿಂದ ಪೂಜಾ ಕಾರ್ಯವನ್ನು ಕೈಗೊಳ್ಳಲಾಯಿತು ಎಂದು ಹಾಲಸ್ವಾಮೀಜಿ ಹೇಳಿದರು.