ದಾವಣಗೆರೆ, ಆ.18- ರೈತರು, ಕಾರ್ಮಿಕರು, ಜನರ ಹಕ್ಕುಗಳ ಉಳಿವಿಗಾಗಿ ಭಾರತ ಉಳಿಸಿ ಅಭಿಯಾನದ ಭಾಗವಾಗಿ ಕರ್ನಾಟಕ ಜನಶಕ್ತಿ ಸಂಘಟನೆ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಸಂಘಟನೆಯ ಕಾರ್ಯಕರ್ತರು, ಕೇಂದ್ರ-ರಾಜ್ಯ ಸರ್ಕಾರಗಳ ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳ ಅನುಸರಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡ, ಹಿರಿಯ ವಕೀಲ ಅನೀಸ್ ಪಾಶಾ, ಕಾರ್ಮಿಕರಿಗೆ ಆಸರೆಯಾಗಿದ್ದ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಯನ್ನು ತಕ್ಷಣವೇ ಸರ್ಕಾರ ಕೈಬಿಡಬೇಕು. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜೆ ಹೊರಡಿಸಿರುವುದನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಮತ್ತು ಸೂರು ಇಲ್ಲದವರಿಗೆ ಭೂಮಿ ಮತ್ತು ವಸತಿ ಹಂಚಿಕೆ ಮಾಡಬೇಕು. ಗ್ರಾಮೀಣ ಭಾಗದ ನರೇಗಾ ಯೋಜನೆಯನ್ನು ನಗರ, ಪಟ್ಟಣ ಪ್ರದೇಶಕ್ಕೂ ವಿಸ್ತರಿಸಿ, ದುಡಿಯುವ ವರ್ಗಕ್ಕೆ ಕೆಲಸನೀಡಬೇಕು. ಎಲ್ಲಾ ಬಡವರಿಗೂ ಕೊರೋನಾ ಪರೀಕ್ಷೆಯನ್ನು ಉಚಿತವಾಗಿ ಮಾಡಿ, ಸಮಗ್ರ ಆಹಾರ ಕಿಟ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಸತೀಶ ಅರವಿಂದ, ಅಸ್ಗರ್, ಆದಿಲ್ ಖಾನ್, ಅಬ್ದುಲ್ ಸಮದ್, ಖಲೀಲ್, ಶೋಯಬ್, ನಿಜಾಮ್ ಇತರರು ಭಾಗವಹಿಸಿದ್ದರು.