ಮಳೆಯಿಂದ ಮನೆಗಳಿಗೆ ಹಾನಿಯಾದ 10ನೇ ವಾರ್ಡ್‌ನ ಸಂತ್ರಸ್ತರಿಗೆ ನೆರವು

ದಾವಣಗೆರೆ, ಆ.18- ನಗರದಲ್ಲಿ ನಿರಂತರ ಮಳೆಯಿಂದ ಮನೆಗಳಿಗೆ ಹಾನಿಯುಂಟಾಗಿ ಸೂರು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಅಗತ್ಯ ಆಹಾರ ಪದಾರ್ಥಗಳ ಕಿಟ್ ಜೊತೆಗೆ ವೈಯುಕ್ತಿಕವಾಗಿ ಆರ್ಥಿಕ ಪರಿಹಾರವನ್ನು ನೀಡಿ ಸಂಕಷ್ಟಕ್ಕೆ ನೆರವಾಗಿದ್ದಾರೆ.

ಪಾಲಿಕೆ ವ್ಯಾಪ್ತಿಯ 10ನೇ ವಾರ್ಡ್ ನಲ್ಲಿ ಇತ್ತೀಚೆಗೆ ಸತತವಾಗಿ ಸುರಿದ ಆಶ್ಲೇಷ ಮಳೆಗೆ ಹಳೆ ದಾವಣಗೆರೆ ಭಾಗದ ಐರಣಿ ಮಠದ ಸಮೀಪದಲ್ಲಿ ಬ್ಯಾಂಕೊಂದರ ಸೆಕ್ಯುರಿಟಿ ಗಾರ್ಡ್ ಟಿ.ಯು. ನಾಗರಾಜ್ ಎಂಬುವರ ಮನೆಯ ಮಣ್ಣಿನ ಗೋಡೆ ಕುಸಿದು ಬಿದ್ದಿತ್ತು. ಅಂತೆಯೇ ದೇವಾಂಗ ಪೇಟೆಯಲ್ಲಿನ ಕೂಲಿ ಕಾರ್ಮಿಕರೋರ್ವರ ಮನೆಯ ಗೋಡೆಯು ಕಳೆದ  ವಾರ ಕುಸಿದು ಬಿದ್ದಿತ್ತು.

ತಮ್ಮ‌ ಮಗ ರಾಕೇಶ್ ಜಾಧವ್ ಸ್ಪರ್ಧಿಸಿ ಗೆದ್ದಿರುವ ಈ 10ನೇ ವಾರ್ಡ್ ನ ಈ ಎರಡೂ ಕಡೆಗಳಿಗೂ ಯಶವಂತ್ ರಾವ್ ಜಾಧವ್ ಅವರು ಮಗನೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಸಂತ್ರಸ್ಥರ ಅಹವಾಲು ಆಲಿಸಿ ಪ್ರತಿ ಮನೆಗೂ ವೈಯುಕ್ತಿಕವಾಗಿ 15 ದಿನದ ಅಗತ್ಯ ಆಹಾರ ಪದಾರ್ಥಗಳು ಹಾಗೂ ತಲಾ 5 ಸಾವಿರ ಪರಿಹಾರವನ್ನು ನೀಡಿದ್ದಾರೆ.

ಮಳೆಗೆ ಕರೀ ಹಂಚಿನ ಎರಡು ಮನೆಗಳ ಗೋಡೆ ಕುಸಿದು ಸಂಕಷ್ಟದಲ್ಲಿದ್ದ ಈ ಎರಡು ಬಡ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ, ಅಕ್ಕಿ, ಬೇಳೆ, ಸಕ್ಕರೆ ಹೀಗೆ ಅಗತ್ಯ ಆಹಾರ ಪದಾರ್ಥಗಳ ಕಿಟ್ ನೀಡಲಾಗಿದೆ.

ವಾರ್ಡ್ ಸದಸ್ಯ ‌ರಾಕೇಶ್ ಜಾಧವ್, ಪ್ರವೀಣ್ ಜಾಧವ್, ವಾರ್ಡ್ ಅಧ್ಯಕ್ಷ ಗೋವಿಂದರಾಜ, ರಾಜು, ಚೇತನ್, ಮಂಜು, ಕುಮಾರ, ಗಣೇಶ್ ಮಾನೆ ಸೇರಿದಂತೆ ಇತರರು ಇದ್ದರು.

error: Content is protected !!