ದಾವಣಗೆರೆ, ಆ.18- ಕೇಂದ್ರ-ರಾಜ್ಯ ಸರ್ಕಾರಗಳು ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಅನುಸರಿಸುತ್ತಿರುವುದಾಗಿ ಆರೋಪಿಸಿ ಜೆಸಿಟಿಯು ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭಾರತ ಉಳಿಸಿ ಆಂದೋಲನದ ಅಂಗವಾಗಿ ಪಾಲಿಕೆ ಆವರಣದ ಹುತಾತ್ಮರ ಸ್ಮಾರಕ ಬಳಿ ಜಮಾಯಿಸಿದ್ದ ಪ್ರತಿಭಟನಾಕಾರರು, ಕೇಂದ್ರ-ರಾಜ್ಯ ಸರ್ಕಾರದ ರೈತ-ಕಾರ್ಮಿಕ-ಜನ ವಿರೋಧಿ ನೀತಿ, ಕ್ರಮಗಳ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಸಂಘಟನೆ ಹಿರಿಯ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ಗುತ್ತಿಗೆ ಕಾರ್ಮಿಕರ(ನಿಯಂತ್ರಣ ಮತ್ತು ನಿಷೇಧ) ಕಾಯ್ದೆಗಳ ಮಾದರಿ ಸ್ಥಾಯಿ ಆದೇಶಗಳ ನಿಗದಿತ ಅವದಿಯ ಕೆಲಸ ಅಳವಡಿಸಲು ತರಲಾದ ಪ್ರಗತಿ ವಿರೋಧಿ ತಿದ್ದುಪಡಿಗಳು, ವ್ಯತ್ಯಾಸ ತುಟ್ಟಿ ಭತ್ಯೆ ಮುಂದೂಡುವಿಕೆ ಆದೇಶಗಳನ್ನು ತಕ್ಷಣ ಹಿಂಪಡೆಯಬೇಕು. ಭೂ ಸಂಬಂಧಿ ಕಾನೂನು,
ಎಪಿಎಂಸಿ ಕಾಯ್ದೆ, ಅಗತ್ಯ ಸಾಮಗ್ರಿ ಕಾಯ್ದೆಗಳಿಗೆ ತಿದ್ದುಪಡಿ ತರಲು ಹೊರಡಿಸಿದ ಸುಗ್ರೀವಾಜೆ ತಿಪ್ಪೆಗೆಸೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ, ಸಿಐಟಿಯು, ಸಿಪಿಐಎಂ, ಎಐಯುಟಿಯುಸಿ ಸೇರಿದಂತೆ ಹತ್ತಾರು ಎಡ ಪಕ್ಷ ಸಂಘಟನೆಗಳ ಮುಖಂಡರಾದ ಮಂಜುನಾಥ ಕೈದಾಳೆ, ಕೆ.ಎಚ್. ಆನಂದರಾಜು, ಆನಂದರಾಜ, ಆವರಗೆರೆ ಎಚ್.ಜಿ. ಉಮೇಶ, ತಿಪ್ಪೇಸ್ವಾಮಿ ಅಣಬೇರು, ಆವರಗೆರೆ ಚಂದ್ರು, ಆವರಗೆರೆ ವಾಸು, ಐರಣಿ ಚಂದ್ರು, ರಂಗನಾಥ ಸೇರಿದಂತೆ ಇತರರು ಭಾಗವಹಿಸಿದ್ದರು.