ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ : ಶಾಸಕ ರಾಮಚಂದ್ರ

ಜಗಳೂರಿನಲ್ಲಿ ನೂತನ ತಹಶೀಲ್ದಾರ್ ನಾಗವೇಣಿ ಅವರಿಗೆ ಸ್ವಾಗತ, ಹುಲ್ಲುಮನೆ ತಿಮ್ಮಣ್ಣ ಅವರಿಗೆ ಬೀಳ್ಕೊಡುಗೆ

ಜಗಳೂರು, ಆ.18- ಸಾಧನೆಗೆ ಬಡತನ ಎಂದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಎಸಿ ಹುಲ್ಲುಮನಿ ತಿಮ್ಮಣ್ಣ ಸಾಧಿಸಿ ತೋರಿಸಿದ್ದಾರೆ ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ, ಶಾಸಕ ಎಸ್ .ವಿ.ರಾಮಚಂದ್ರ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ  ಸಭಾಂಗಣದಲ್ಲಿ  ಕಂದಾಯ ಇಲಾಖೆ, ತಾಲ್ಲೂಕು ಸರಕಾರಿ ನೌಕರರ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ  ಹುಲ್ಲುಮನಿ ತಿಮ್ಮಣ್ಣ ಅವರಿಗೆ  ಬೀಳ್ಕೊಡುಗೆ  ಮತ್ತು  ನೂತನ ತಹಶೀಲ್ದಾರ್ ನಾಗವೇಣಿ ಅವರಿಗೆ ಸ್ವಾಗತ ಕೋರುವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ತಿಮ್ಮಣ್ಣ ಅವರ ಸಾಧನೆ ತೋರಿಸಿದ್ದಾರೆ. ಇಂದಿನ ಯುವ ಪಿಳಿಗೆಗೆ ಮಾದರಿಯಾಗಿದೆ. ಕಷ್ಟಪಟ್ಟು ಅಭ್ಯಾಸ ಮಾಡಿದರೆ ಉನ್ನತ ಸ್ಥಾನ ದೊರೆತೇ ದೊರೆಯುತ್ತದೆ ಎಂಬುದಕ್ಕೆ ತಿಮ್ಮಣ್ಣ ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿರುವುದು ಸಾಕ್ಷಿಯಾಗಿದೆ ಎಂದರು.

ಲಾಕ್‌ಡೌನ್ ಸಮಯದಲ್ಲಿ ತಿಮ್ಮಣ್ಣ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು  ಉತ್ತಮವಾಗಿ ಕೆಲಸ ಮಾಡಿದ್ದರಿಂದ ಕೊರೊನಾ ಹಾವಳಿ ಕಡಿಮೆ ಇದೆ ಎಂದ ಅವರು, ತಾಲ್ಲೂಕಿನ ಜನತೆ ಮುಗ್ದರಾಗಿದ್ದು ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳು  ಸಮರ್ಪಕವಾಗಿ  ಕಾರ್ಯ ನಿರ್ವಹಿಸಲು ಸಹಕಾರ ನೀಡುತ್ತಾರೆ ಎಂದರು.

ಸಿಪಿಐ ದುರುಗಪ್ಪ ಮಾತನಾಡಿ, ಜನಾನುರಾಗಿಯಾಗಿ ಕೆಲಸ ಮಾಡುವುದರ ಮೂಲಕ ತಹಶೀಲ್ದಾರ್ ಹುದ್ದೆಗೆ ನ್ಯಾಯ ಒದಗಿಸಿದ್ದಾರೆ. ಸಾರ್ವಜನಿಕರ ಸೇವೆಯನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಇ.ಓ. ಮಲ್ಲಾನಾಯ್ಕ ಮಾತನಾಡಿ, ಕೊರೊನಾ ಪ್ರಾರಂಭದ ಹಂತದಲ್ಲಿರುವಾಗ ತಿಮ್ಮಣ್ಣ ಅವರು ಹಗಲು-ರಾತ್ರಿ ಕೆಲಸ ಮಾಡಿದ್ದಲ್ಲದೆ ಇತರೆ ಅಧಿಕಾರಿಗಳಿಂದ ಕೆಲಸವನ್ನು ತೆಗೆದುಕೊಂಡರು ಎಂದರು.

ಉಪವಿಭಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ,  ಬಡವರ ಕಣ್ಣೀರೊರೆಸುವ ಹುದ್ದೆ ಎಂದರೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಹುದ್ದೆಯಾಗಿದೆ. ಈ ಹುದ್ದೆ ನಿಭಾಯಿಸಲು ಕ್ಷೇತ್ರದ ಆಧುನಿಕ ಭಗೀರತ ಎಂದು ಕರೆಯುವ ಕ್ಷೇತ್ರದ ಶಾಸಕರ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗವೇಣಿ,  ಜಿ.ಪಂ ಸದಸ್ಯ ಮಂಜುನಾಥ್, ತಾ.ಪಂ ಸದಸ್ಯ ಸಿದ್ದೇಶ್, ತಾಲ್ಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಜ್ಜಯ್ಯ, ರೈತ ಸಂಘದ ಮುಖಂಡರು,  ನೌಕರರ ಸಂಘದ ಪಧಾದಿಕಾರಿಗಳು ಹಾಜರಿದ್ದರು.

error: Content is protected !!