ಹರಿಹರ : ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಮ್ಮತಿ ನೀಡಲು ಮನವಿ

ಹರಿಹರ, ಆ.17- ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಕೊವಿಡ್ -19 ಹಿನ್ನೆಲೆಯಲ್ಲಿ ಅನುಮತಿ ನೀಡದೆ ಇರುವುದು ಧಾರ್ಮಿಕ ಭಾವನೆ, ಶ್ರದ್ಧೆ, ಏಕತೆಗೆ ಧಕ್ಕೆ ತರುವಂತಹ ರೀತಿಯಲ್ಲಿ ಮಾಡಿರುವ ನಿರ್ಧಾರವಾಗಿದೆ ಎಂದು ಹೇಳಿರುವ ಹಿಂದು ಜಾಗರಣ ವೇದಿಕೆಯು, ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ತಹಶೀಲ್ದಾರ್ ಕಚೇರಿ ಅಧಿಕಾರಿ ಚೆನ್ನವೀರಸ್ವಾಮಿ ಅವರಿಗೆ ಮನವಿ ಅರ್ಪಿಸಿತು.

ಈ ವೇಳೆ ಮಾತನಾಡಿದ ಮುಖಂಡರು, ಸ್ವಾತಂತ್ರ್ಯ ಸಂಗ್ರಾಮದ ನೇತಾರ ಶ್ರೀ ಬಾಲಗಂಗಾಧರ್ ತಿಲಕ್ ಅವರು ದೇಶವನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಲು ಮನೆಯಲ್ಲಿ ಇದ್ದ ಶ್ರೀ ಗಣೇಶ ಮೂರ್ತಿಯನ್ನು ಸಾರ್ವಜನಿಕಗೊಳಿಸಿ ಜಾತಿ, ಪ್ರಾಂತ್ಯ, ಭಾಷೆ, ಪಕ್ಷ ಮರೆತು ಏಕತೆಯ ಸೂತ್ರದಲ್ಲಿ ಪೋಣಿಸಿದರು. 125 ವರ್ಷ ಗಳಿಂದ ಈ ಸಂಪ್ರದಾಯವನ್ನು ದೇಶದ ಮೂಲೆ ಮೂಲೆಗಳಲ್ಲಿ ಪಸರಿಸಿ ದೇಶದ ಧರ್ಮದ ರಕ್ಷಣೆ ಮಾಡಿ ಲಕ್ಷಾಂತರ ಯುವಕರಿಗೆ ಪ್ರೇರಣೆಯಾದರು. ಇಂತಹ ಗಣೇಶೋತ್ಸವಕ್ಕೆ ಅನುಮತಿ ನೀಡುವಲ್ಲಿ ಸರ್ಕಾರ ಕೊರೊನಾ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಹೇರಿರುವುದು ಸರ್ಕಾರಕ್ಕೆ ಶೋಭೆಯಲ್ಲ ಎಂದು ಹೇಳಿದರು.

ದೇಶದ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ವೇಳೆ ಇಲ್ಲದ ನಿರ್ಬಂಧ ಈಗೇಕೆ ? ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚು ಇದ್ದರೂ ಅಲ್ಲಿ ಅನುಮತಿ ನೀಡಿದ್ದು, ಕರ್ನಾಟಕದಲ್ಲಿ ಅದೇ ರೀತಿಯಲ್ಲಿ ಅವಕಾಶ ನೀಡಬೇಕು. ಬಾರ್, ಮಹಲ್, ಸಾರಿಗೆ, ದೇವಸ್ಥಾನ,  ಮಸೀದಿ, ಚರ್ಚ್, ಜಿಮ್ ಗಳಿಗೆ ಅವಕಾಶ ನೀಡಿ ಉತ್ಸವಕ್ಕೆ ಯಾಕೆ ನಿರ್ಬಂಧ ಹೇರಬೇಕು? ಎಂಬ ವೇದಿಕೆ ಪ್ರಶ್ನಿಸಿದೆ. 

ಈ ಸಂದರ್ಭದಲ್ಲಿ ದಿನೇಶ್, ಮಂಜು ರಟ್ಟಿಹಳ್ಳಿ, ಚೇತನ್ ತಿಪ್ಪಶೆಟ್ಟರ್, ನವನೀತ, ಪ್ರವೀಣ್, ಅರ್ಜುನ್, ಕಿರಣ್ ಇನ್ನಿತರರಿದ್ದರು.  

error: Content is protected !!