ದೆಹಲಿಯ ಕೆಂಪು ಕೋಟೆಯ ಮೇಲೆ ನಡೆದ ಸ್ವಾತಂತ್ರ್ಯೋತ್ಸವವನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಅತ್ಯುತ್ತಮ ಉತ್ಪನ್ನಗಳಿಂದ ಶ್ರೇಷ್ಠ ಭಾರತಕ್ಕೆ ಪ್ರಧಾನಿ ಮೋದಿ ಕರೆ
ನವದೆಹಲಿ, ಆ. 15 – ಕೆಂಪು ಕೋಟೆಯ ಮೇಲೆ ನೆರವೇರಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆತ್ಮ ನಿರ್ಭರ್ ಭಾರತಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸ್ವಾವಲಂಬನೆಯ ಕಡೆಗಿನ ಭಾರತದ ನಡಿಗೆಯನ್ನು ಕೊರೊನಾ ನಿಲ್ಲಿಸಲಾಗದು ಎಂದಿದ್ದಾರೆ.
ಸತತ ಏಳನೇ ಬಾರಿಗೆ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿರುವ ಅವರು, ಭಾರತದ ಸಾರ್ವಭೌಮತಕ್ಕೆ ಸವಾಲೆಸೆಯುವವರಿಗೆ ಅವರದೇ ಭಾಷೆಯಲ್ಲಿ ಉತ್ತರಿಸಲಾಗುವುದು ಎಂದಿದ್ದಾರೆ.
ಡಿಜಿಟಲ್ ಆರೋಗ್ಯ ಮಿಷನ್ಗೆ ಚಾಲನೆ, ಆರು ಲಕ್ಷ ಗ್ರಾಮಗಳನ್ನು ಆಪ್ಟಿಕಲ್ ಫೈಬರ್ನಿಂದ ಜೋಡಿಸುವುದು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಚುನಾವಣೆ ನಡೆಸುವುದೂ ಸೇರಿದಂತೆ ವಿಷಯಗಳಿಗೆ ಸಂಬಂಧಿಸಿದಂತೆ ಮೋದಿ ಘೋಷಣೆ ಮಾಡಿದ್ದಾರೆ.
ಸಾಂಪ್ರದಾಯಿಕ ಕುರ್ತಾ ಪೈಜಾಮ ದಿರಿಸಿನಲ್ಲಿದ್ದ ಪ್ರಧಾನಿ ಸುಮಾರು 90 ನಿಮಿಷಗಳ ಮಾತನಾಡಿದ್ದು, ಆತ್ಮನಿರ್ಭರ್ ಅಭಿಯಾನದ ಮೂಲಕ ಆಮದು ಕಡಿಮೆ ಮಾಡಿ ರಫ್ತಿಗೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ.
ಭಾರತ ದೇಶವನ್ನು ಮೇಕ್ ಇನ್ ಇಂಡಿಯಾದ ಜೊತೆಗೆ ಮೇಕ್ ಫಾರ್ ವರ್ಲ್ಡ್ ಮಂತ್ರದ ಜೊತೆಗೆ ಮುಂದುವರೆಯಬೇಕು ಎಂದು ಹೇಳಿರುವ ಮೋದಿ, ಆತ್ಮನಿರ್ಭರ್ ಭಾರತ್ ಕೇವಲ ಪದವಲ್ಲ, ಇಂದು 130 ಕೋಟಿ ಭಾರತೀಯರ ಮನಸ್ಸಿನಲ್ಲಿ ದಿವ್ಯ ಮಂತ್ರವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದ್ದಾರೆ.
ಡಿಜಿಟಲ್ ಹೆಲ್ತ್ ಮಿಷನ್ಗೆ ಚಾಲನೆ
ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸುವುದಾಗಿ ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯದ ಗುರುತಿನ ಸಂಖ್ಯೆ ನೀಡಲಾಗುವುದು. ಇದರಲ್ಲಿ ವ್ಯಕ್ತಿಯ ಆರೋಗ್ಯ ದಾಖಲೆಗಳಿರ ಲಿವೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ಗೆ ಶನಿವಾರ ಚಾಲನೆ ನೀಡಲಾಗಿದೆ. ಇದು ಆರೋಗ್ಯ ವಲಯದಲ್ಲಿ ದೊಡ್ಡ ಕ್ರಾಂತಿ ತರಲಿದೆ. ಇದರಿಂದಾಗಿ ಜನರ ಪ್ರತಿಯೊಂದು ಪರೀಕ್ಷೆ, ರೋಗ ಹಾಗೂ ಚಿಕಿತ್ಸೆಯ ವರದಿ ಗಳು ಒಂದೇ ಗುರುತಿನ ಸಂಖ್ಯೆ ಮೂಲಕ ಲಭ್ಯವಿರಲಿವೆ ಎಂದವರು ತಿಳಿಸಿದ್ದಾರೆ.
ದೇಶದ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ತಲುಪಿಸಲು ಮಾರ್ಗಸೂಚಿ
ವಿಜ್ಞಾನಿಗಳ ಹಸಿರು ನಿಶಾನೆ ತೋರಿಸಿದ ನಂತರ ದೊಡ್ಡ ಪ್ರಮಾಣದಲ್ಲಿ ಕೊರೊನಾ ಲಸಿಕೆ ಉತ್ಪಾದನೆ ಭಾರತದಲ್ಲಿ ಆರಂಭವಾಗ ಲಿದೆ. ದೇಶದ ಪ್ರತಿಯೊಬ್ಬರಿಗೂ ಅಲ್ಪ ಅವಧಿಯಲ್ಲಿ ಲಸಿಕೆ ತಲುಪಿಸಲು ಮಾರ್ಗಸೂಚಿ ಸಿದ್ಧವಾಗಿದೆ ಎದು ಪ್ರಧಾನಿ ನರೇಂದ್ರ ಮೋದಿ ಹೇಳಿ ದ್ದಾರೆ. ನಮ್ಮ ವಿಜ್ಞಾನಿಗಳು ಋಷಿ – ಮುನಿಗಳ ರೀತಿಯಲ್ಲಿ ಪ್ರಯೋಗಾ ಲಯಗಳಲ್ಲಿ ಕಠಿಣ ಪರಿಶ್ರಮ ವಹಿಸಿದ್ದಾರೆ. ಪ್ರಸಕ್ತ ಮೂರು ಲಸಿಕೆಗಳು ವಿವಿಧ ಹಂತಗಳ ಪರೀಕ್ಷೆಯಲ್ಲಿವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಮಹಿಳೆಯರ ಕನಿಷ್ಠ ಮದುವೆ ವಯಸ್ಸಿಗೆ ಸಮಿತಿ
ಮಹಿಳೆಯರ ಕನಿಷ್ಠ ಮದುವೆ ವಯಸ್ಸು ಎಷ್ಟಿರಬೇಕು ಎಂಬುದರ ಬಗ್ಗೆ ಸರ್ಕಾರ ಸಮಾಲೋಚನೆ ನಡೆಸುತ್ತಿದ್ದು, ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಸಕ್ತ ಮಹಿಳೆಯರ ಕನಿಷ್ಠ ಮದುವೆ ವಯಸ್ಸು 18 ಹಾಗೂ ಪುರುಷರ ಮದುವೆ ವಯಸ್ಸು 21 ಆಗಿದೆ. ಮದುವೆಯ ವಯಸ್ಸಿನಲ್ಲಿರುವ ವ್ಯತ್ಯಾಸ ಇತ್ತೀಚೆಗೆ ಆಕ್ಷೇಪಕ್ಕೆ ಕಾರಣವಾಗುತ್ತಿದೆ.
ಕ್ಷೇತ್ರ ಪುನರ್ವಿಂಗಡಣೆ ನಂತರ ಜಮ್ಮು – ಕಾಶ್ಮೀರದ ಚುನಾವಣೆ
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್ವಿಂಗಡಣೆ ಪೂರ್ಣಗೊಂಡ ನಂತರ ಅಲ್ಲಿ ಚುನಾವಣೆ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಕಳೆದ ಒಂದು ವರ್ಷದ ಅವಧಿ ಮಹತ್ವಪೂರ್ಣ ಬೆಳವಣಿಗೆಯ ಘಟ್ಟವಾಗಿದೆ. ಈ ಅವಧಿಯಲ್ಲಿ ಮಹಿಳೆಯರು, ದಲಿತರು ಹಾಗೂ ವಲಸಿಗರಿಗೆ ಮೂಲಭೂತ ಹಕ್ಕುಗಳು ಹಾಗೂ ಘನತೆ ನೀಡಲಾಗಿದೆ ಎಂದವರು ಹೇಳಿದ್ದಾರೆ.
ಎಲ್ಲಾ ಗ್ರಾಮಗಳಿಗೆ ಸಾವಿರ ದಿನಗಳಲ್ಲಿ ಆಪ್ಟಿಕ್ ಫೈಬರ್
ಮುಂದಿನ ಸಾವಿರ ದಿನಗಳಲ್ಲಿ ದೇಶದ ಎಲ್ಲಾ ಆರು ಲಕ್ಷಕ್ಕೂ ಹೆಚ್ಚಿನ ಗ್ರಾಮಗಳನ್ನು ಆಪ್ಚಿಕಲ್ ಫೈಬರ್ ಮೂಲಕ ಸಂಪರ್ಕಿಸ ಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಸಾಗರ ತಳದ ಮೂಲಕ ಲಕ್ಷದ್ವೀಪಕ್ಕೂ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸಲಾಗುವುದು.2014ರಲ್ಲಿ ಕೆಲವೇ ಹಳ್ಳಿಗಳಿಗೆ ಆಪ್ಪಿಕಲ್ ಫೈಬರ್ ಸಂಪರ್ಕ ಇತ್ತು. ಕಳೆದ ಐದು ವರ್ಷಗಳಲ್ಲಿ 1.5 ಲಕ್ಷ ಗ್ರಾಮಗಳನ್ನು ಆಪ್ಟಿಕಲ್ ಫೈಬರ್ ಮೂಲಕ ಸಂಪರ್ಕಿಸಲಾಗಿದೆ ಎಂದವರು ಹೇಳಿದ್ದಾರೆ.
100 ನಗರಗಳಲ್ಲಿ ಮಾಲಿನ್ಯ ಕಡಿಮೆ ಮಾಡಲು ಅಭಿಯಾನ
ದೇಶದ 100 ಆಯ್ದ ನಗರಗಳಲ್ಲಿ ಮಾಲಿನ್ಯ ಕಡಿಮೆ ಮಾಡಲು ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮಾಲಿನ್ಯ ನಿವಾರಣೆಗಾಗಿ ಸಮಗ್ರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ 2019ರಲ್ಲಿ ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮ ಆರಂಭಿಸಲಾಗಿದೆ ಎಂದೂ ಪ್ರಧಾನಿ ತಿಳಿಸಿದ್ದಾರೆ.
ಸಾರ್ವಭೌಮತ್ವಕ್ಕೆ ಸವಾಲೆಸೆಯುವವರಿಗೆ ತಕ್ಕ ಉತ್ತರ
ಎಲ್.ಒ.ಸಿ. ಯಿಂದ ಎಲ್.ಎ.ಸಿ.ವರೆಗೆ ಭಾರತದ ಸಾರ್ವಭೌಮತ್ವಕ್ಕೆ ಸವಾಲೆಸೆಯುವವರಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪಾಕಿಸ್ತಾನ ಹಾಗೂ ಚೀನಾಗಳ ಹೆಸರನ್ನು ಪ್ರಧಾನಿ ನೇರವಾಗಿ ಹೇಳಲಿಲ್ಲವಾದರೂ, ನಿಯಂತ್ರಣ ರೇಖೆ ಹಾಗೂ ನೈಜ ನಿಯಂತ್ರಣ ರೇಖೆ ಕುರಿತು ಅವರು ಮಾತನಾಡಿದ್ದು ಈ ಎರಡು ದೇಶಗಳ ಕುರಿತು ಎಂಬುದು ಸ್ಪಷ್ಟವಾಗಿತ್ತು.
ಕೇಂದ್ರ ಸರ್ಕಾರ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ. ಇದರಿಂದಾಗಿ ವಿದೇಶಿ ನೇರ ಹೂಡಿಕೆ ಕಳೆದ ವರ್ಷ ದಾಖಲೆಯ ಮಟ್ಟಕ್ಕೆ ತಲುಪಿದೆ ಎಂದು ಮೋದಿ ತಿಳಿಸಿದ್ದಾರೆ.
ಭಾರತದ ನೀತಿಗಳು, ಪ್ರಕ್ರಿಯೆ ಹಾಗೂ ಉತ್ಪನ್ನಗಳು ವಿಶ್ವದಲ್ಲೇ ಅತ್ಯುತ್ತಮವಾಗಿರಬೇಕು ಎಂದು ಹೇಳಿರುವ ಪ್ರಧಾನಿ, ಆಗ ಮಾತ್ರವೇ ಶ್ರೇಷ್ಠ ಭಾರತ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದಿದ್ದಾರೆ.
ಒಟ್ಟಾರೆ ಆರ್ಥಿಕ ಬೆಳವಣಿಗೆ ಹಾಗೂ ಸ್ವಾವಲಂಬನೆಯ ಬಗ್ಗೆ ಒತ್ತು ನೀಡಿರುವ ಪ್ರಧಾನಿ, ಈ ಎಲ್ಲ ಪ್ರಕ್ರಿಯೆಗಳಲ್ಲಿ ಮಾನವೀಯತೆ ಕೇಂದ್ರ ಸ್ಥಾನದಲ್ಲಿರಬೇಕು ಎಂದಿದ್ದಾರೆ.
ಆತ್ಮನಿರ್ಭರ್ ಭಾರತದ ಎದುರು ಹಲವಾರು ಸವಾಲುಗಳು ಹಾಗೂ ಕಳವಳಗಳಿವೆ. ಆದರೆ, ಲಕ್ಷಾಂತರ ಸವಾಲುಗಳಿಗೆ ದೇಶದಲ್ಲಿ ಕೋಟ್ಯಂತರ ಪರಿಹಾರಗಳಿವೆ. ವೋಕಲ್ ಫಾರ್ ಲೋಕಲ್ ಎಂಬುದು ಭಾರತದ ಮಂತ್ರವಾಗಿದೆ ಎದು ಮೋದಿ ಹೇಳಿದ್ದಾರೆ.
ತಮ್ಮ ಸರ್ಕಾರ ರೈತರನ್ನು ನಿರ್ಬಂಧಗಳಿಂದ ಮುಕ್ತಗೊಳಿಸಿದೆ. ಈಗ ಅವರು ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ಮಾರಬಹುದಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಸೋಪು ಇಲ್ಲವೇ ಬಟ್ಟೆ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ತಮಗೆ ಇಷ್ಟ ಬಂದ ಹಾಗೆ ಮಾರುತ್ತಾರೆ. ಆದರೆ, ಸ್ವಾತಂತ್ರ್ಯ ದೊರೆತ 70 ವರ್ಷಗಳ ನಂತರವೂ ರೈತರು ವ್ಯಾಪಾರದ ಸ್ವಾತಂತ್ರ್ಯ ಹೊಂದಿರಲಿಲ್ಲ ಎಂದು ಪ್ರಧಾನಿ ವಿಷಾದಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ವೈದ್ಯರು, ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ನೈರ್ಮಲ್ಯ ಕಾರ್ಮಿಕರೂ ಸೇರಿದಂತೆ ಕೊರೊನಾ ವಾರಿಯರ್ಗಳಿಗೆ ಪ್ರಶಂಸಿಸಿರುವ ಪ್ರಧಾನಿ, ಭಾರತ ಕೊರೊನಾ ವಿರುದ್ದ ಜಯ ಸಾಧಿಸಲಿದೆ ಎಂಬುದು 130 ಕೋಟಿಗೂ ಹೆಚ್ಚಿನ ನಾಗರಿಕರ ಬದ್ಧತೆಯಾಗಿದೆ ಎಂದಿದ್ದಾರೆ.