ದಾವಣಗೆರೆ, ಆ.15- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ಸ್ಥಳೀಯ ದಲಿತ ಸಮುದಾಯದ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಇಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯಿಂದ ಜಿಲ್ಲಾ ಮಟ್ಟದ ಧರಣಿ ಸತ್ಯಾಗ್ರಹ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ್ದ ಸಮಿತಿ ಕಾರ್ಯಕರ್ತರು, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧರಣಿ ಆರಂಭಿಸಿದರು. ನಂತರ ಜಿಲ್ಲಾಧಿಕಾರಿಗಳು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಹಿರಿಯ ಕಾರ್ಮಿಕ ನಾಯಕ ಹೆಚ್.ಕೆ. ರಾಮಚಂದ್ರಪ್ಪ, ಸಂವಿಧಾನವೇ ನಮ್ಮ ಪವಿತ್ರವಾದ ಗ್ರಂಥ, ಅದರ ಉಳಿವಿಗಾಗಿ ನಾವು ಸದಾ ಜಾಗೃತರಾಗಿ ಹೋರಾಡಬೇಕು. ಇಲ್ಲದಿದ್ದರೆ ದಲಿತರ ಬದುಕು ಯಾವ ಕಾರಣಕ್ಕೂ ಹಸನಾಗುವುದಿಲ್ಲ. ವಿಛಿದ್ರಕಾರಿ ಕೋಮುವಾದಿ ಶಕ್ತಿಗಳು ಬಲಗೊಂಡು ಸಂವಿಧಾನವನ್ನು ನಾಶಗೊಳಿಸಲು ಷಡ್ಯಂತ್ರ ರೂಪಿಸುತ್ತವೆ ಎಂದು ಕಿಡಿ ಕಾರಿದರು.
ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಡಿಎಸ್-4 ಕರ್ನಾಟಕ ಜಿಲ್ಲಾಧ್ಯಕ್ಷ ಹೆಗ್ಗರೆ ರಂಗಪ್ಪ ಮಾತನಾಡಿ, ಈ ದೇಶದ ದಲಿತರ ಬದುಕು ಹಸನಾಗಿಲ್ಲ. ಬದಲಾಗಿ ದಲಿತರ ಮೇಲಿನ ಶೋಷಣೆ, ದೌರ್ಜನ್ಯ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಅತ್ಯಾಚಾರದಂತಹ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಿವೆ. ಕಾನೂನಿನ ರಕ್ಷಣೆ ಇದ್ದಾಗ್ಯೂ ದಲಿತರ ಬದುಕು ಬೀದಿ ಪಾಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಸಂತೋಷ್ ಎಂ. ತೋಟದವರ, ಪ್ರಧಾನ ಕಾರ್ಯದರ್ಶಿ ಎಸ್.ಹೆಚ್. ಶಾಂತರಾಜ್, ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ಮೂರ್ತಿ ಬೆಳ್ಳಿಗನೂಡು, ಎಲ್. ಜಯಪ್ಪ, ಬಿ. ಹನುಮಂತಪ್ಪ ಹಳೇಚಿಕ್ಕನಹಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾದಾಪುರ ಸಿದ್ದೇಶ್, ಮಹಾಂತೇಶ್ ಕಮ್ಮಾಗರಟ್ಟೆ, ಷಡಾಕ್ಷರಪ್ಪ ಕಣಿವೆಬಿಳಚಿ, ತಾಲ್ಲೂಕು ಅಧ್ಯಕ್ಷ ಡಿ.ಎಸ್. ನಟರಾಜ್ ಚನ್ನಗಿರಿ, ಹನುಮಂತಪ್ಪ ಹೊನ್ನಾಳಿ, ನ್ಯಾಮತಿ ಹಾಲೇಶ್, ಮಂಜುನಾಥ್ ಹರಿಹರ, ಬಾಬು ರಾಜೇಂದ್ರ ಪ್ರಸಾದ್ ಜಗಳೂರು ಹಾಗೂ ಕೊರಚ ಜಿಲ್ಲಾಧ್ಯಕ್ಷ ಮಾರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.